ಹಾಸನ: ತನ್ನದಲ್ಲದ ತಪ್ಪಿಗೆ ಎಲ್ಲಿ ಕೆಲಸದಿಂದ ಅಮಾನತು ಮಾಡುತ್ತಾರೋ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ದಕ್ಷ ಮತ್ತು ಪ್ರಾಮಾಣಿಕ ಪಿಎಸ್ಐ ಕಿರಣ್ ಕುಮಾರ್ ಇನ್ನು ನೆನಪು ಮಾತ್ರ.
2009ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಇವರು, ಚಾಮರಾಜನಗರದ ಗ್ರಾಮಾಂತರ ಠಾಣೆ ಮತ್ತು ಅದೇ ಜಿಲ್ಲೆಯ ಬೇಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ವರ್ಷ ಸ್ವಂತ ಜಿಲ್ಲೆಯಾದ ಹಾಸನದ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡು ಉತ್ತಮ ಕೆಲಸದ ಮೂಲಕ ಹೆಸರು ಗಳಿಸಿದ್ದರು.
ಪ್ರಾಮಾಣಿಕ ಅಧಿಕಾರಿ ಜೀವಕ್ಕೆ ಕುತ್ತು ತಂದ ಕೊಲೆ ಪ್ರಕರಣಗಳು ಅಮಾನತುಗೊಳ್ಳುವ ಭಯದಿಂದ ಚನ್ನರಾಯಪಟ್ಟಣ ಪಿಎಸ್ಐ ಆತ್ಮಹತ್ಯೆ..!
ದುರಾದೃಷ್ಟವಶಾತ್ ಜೂನ್ 29 ಮತ್ತು 31ರಂದು ನಡೆದ ಎರಡು ಕೊಲೆ ಪ್ರಕರಣಗಳು ಇವರ ಬದುಕಿಗೆ ನಾಂದಿ ಹಾಡಿವೆ. ಕೊಲೆ ಪ್ರಕರಣದಲ್ಲಿ ಕರ್ತವ್ಯಲೋಪ ಆಗದಿದ್ದರೂ, ಎಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸದೇ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿ, ಕೆಲಸದಿಂದ ಅಮಾನತು ಮಾಡುತ್ತಾರೋ ಎಂಬ ಭಯದಿಂದ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕಳುಹಿಸಿಕೊಡಲು ಸಿದ್ಧತೆ ನಡೆಯುತ್ತಿದೆ.