ಹಾಸನ: ಮಹಿಳೆ ನಾಪತ್ತೆ ಪ್ರಕರಣ ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಗಾರನೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟು ಬಳಿಕ ತಗಲಾಕಿಕೊಂಡಿದ್ದಾನೆ. ಹೌದು, ಕೊಲೆ ಮಾಡಿದ ಆರೋಪಿಯೇ ಪೊಲೀಸರ ದಾರಿ ತಪ್ಪಿಸಿ ಕೊನೆಗೆ ಸಿಕ್ಕಿಬಿದ್ದ ಪ್ರಕರಣ ಇದು. ಮಹಿಳೆಯ ಬೆಳ್ಳಿ ಕಾಲುಂಗುರ ನೀಡಿದ ಸುಳಿವಿನಿಂದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಫ್ಲಾಶ್ ಬ್ಯಾಕ್ ನೋಡೊದಾದ್ರೆ: ಜುಲೈ 21ರಂದು ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ನಾರಾಯಣಪುರ ಗ್ರಾಮದ ರತ್ನಮ್ಮ ಕಾಣೆಯಾಗಿದ್ದು, ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. 9 ದಿನಗಳ ನಂತರವೂ ರತ್ನಮ್ಮನ ಸುಳಿವು ಸಿಗದ ಹಿನ್ನೆಲೆಯಲ್ಲಿ ರತ್ನಮ್ಮನ ಪುತ್ರ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಪತ್ರಿಕಾಗೋಷ್ಠಿ ನಡೆಸಿ, ನಾಪತ್ತೆ ಪ್ರಕರಣ ತನಿಖೆ ನಡೆಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸುತ್ತಾರೆ.
ಬಳಿಕ ಪೊಲೀಸರು ರತ್ನಮ್ಮನ ಫೋಟೋ ಹಿಡಿದು ಹುಡುಕಾಟಕ್ಕೆ ಪ್ರಾರಂಭ ಮಾಡುತ್ತಾರೆ. ಅಲ್ಲದೇ ಅನುಮಾನಾಸ್ಪದ ವ್ಯಕ್ತಿ ಮಹೇಶ ಎಂಬಾತನನ್ನ ಪೊಲೀಸ್ ಠಾಣೆಗೆ ಕರೆದು 3-4ಬಾರಿ ವಿಚಾರಣೆ ನಡೆಸುತ್ತಾರೆ. ಅಷ್ಟೇ ಅಲ್ಲದೆ ಎರಡು ಮೂರು ಬಾರಿ ಏರೋಪ್ಲೇನ್ ಹತ್ತಿಸಿ ವಿಚಾರಣೆ ನಡೆಸುತ್ತಾರೆ. ಆದರೂ ಮಹೇಶನಿಂದ ಯಾವುದೇ ರೀತಿಯ ಸುಳಿವು ಸಿಗುವುದಿಲ್ಲ. ಬದಲಿಗೆ ನಾನು ಕೊಲೆ ಮಾಡಿಲ್ಲ, ನನಗೆ ಈ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಾನೆ.
ಪೊಲೀಸರನ್ನೇ ದಾರಿ ತಪ್ಪಿಸಿದ ಚಾಣಾಕ್ಷ:ಆದರೆ ನಾಪತ್ತೆಯಾಗಿದ್ದ ರತ್ನಮ್ಮನ ಎಲ್ಲಿದ್ದಾರೆ ಅಂತ ನನಗೆ ಗೊತ್ತಿದೆ. ನನಗೆ ಯಾರು 20 ಸಾವಿರ ಕೊಡುತ್ತಾರೋ ಅವರಿಗೆ ಸುಳಿವು ನೀಡುತ್ತೇನೆ ಅಂತ ಕುಡಿದ ಅಮಲಿನಲ್ಲಿ ನನಗೆ ಮಹೇಶ ಹೇಳಿದ ಅಂತ ಕೊಲೆಗಾರನೇ ಪೊಲೀಸರಿಗೆ ಟ್ವಿಸ್ಟ್ ಕೊಡುತ್ತಾನೆ. ಈ ವ್ಯಕ್ತಿಯ ಮಾತನ್ನು ಕೇಳಿ ದಾರಿ ತಪ್ಪಿದ ಪೊಲೀಸರು ಮತ್ತೊಮ್ಮೆ ಮಹೇಶನನ್ನು ಠಾಣೆಗೆ ಕರೆತಂದು, ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಾರೆ. ಆದರೂ ಪೊಲೀಸರಿಗೆ ಸಾಧ್ಯವಾಗಲ್ಲ.
ಈ ಬೆನ್ನಲ್ಲೇ ಅದೇ ಗ್ರಾಮದ ನಾರಾಯಣಪುರ ಗ್ರಾಮದ ಸ್ವಾಮಿ ಎಂಬುವರ ಜಮೀನಿನಲ್ಲಿ ಅಪರಿಚಿತ ಮಹಿಳೆಯೊಬ್ಬರ ಉದ್ದನೆಯ ಜಡೆ, ತಲೆ ಬುರುಡೆ, ಕೆಲವು ದೇಹದ ಅಂಗಾಂಗದ ಮೂಳೆಗಳು ಕಾಣ ಸಿಗುತ್ತವೆ. ಭಯಗೊಂಡ ಸ್ವಾಮಿ, ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಪೊಲೀಸರು ಸ್ಥಳ ಪರಿಶೀಲಿಸಿ, ಅಲ್ಲಿದ್ದ ಮೂಳೆಗಳ ಬಿಡಿ ಭಾಗಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು, ಪರೀಕ್ಷೆ ಮಾಡಿದ ಬಳಿಕ ಇದು ರತ್ನಮ್ಮನ ದೇಹದ ಭಾಗಗಳು ಎಂದು ಗೊತ್ತಾಗುತ್ತೆ. ಪರೀಕ್ಷಾ ವರದಿ ಬಂದ ಬಳಿಕ ಮತ್ತೆ ಅದೇ ಮಹೇಶನನ್ನು ಪೊಲೀಸರು ಐದನೇ ಬಾರಿ ವಿಚಾರಿಸಿದರೂ ಯಾವ ಸುಳಿವು ಸಿಗಲ್ಲ.
ಸುಳಿವು ಕೊಟ್ಟ ಕಾಲುಂಗುರ:ಕೊಲೆಯಾದ ಸ್ಥಳದಲ್ಲಿ ಮತ್ತೆ ಏನಾದರೂ ಸಿಗಬಹುದು ಎಂಬ ಅನುಮಾನದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಮೆಟಲ್ ಡಿಟೆಕ್ಟರ್ ಮೂಲಕ ಹುಡುಕಾಟ ನಡೆಸಿದಾಗ, ಮಹಿಳೆಯ ಕಾಲಿನ ಉಂಗುರ ಹಾಗೂ ಕಿವಿಯ ಓಲೆ ಸಿಗುತ್ತದೆ. ಕಾಲುಂಗುರ ಮತ್ತು ಓಲೆ ಸಿಕ್ಕ ಬಳಿಕ ಪೋಷಕರು ಮತ್ತೊಂದು ದೂರು ದಾಖಲು ಮಾಡುತ್ತಾರೆ. ನಮ್ಮ ತಾಯಿಯ ಕುತ್ತಿಗೆಯಲ್ಲಿ ಮಾಂಗಲ್ಯ ಸರ ಮತ್ತು ಚಿನ್ನದ ಸರ ಇತ್ತು . ಬಂಗಾರದ ಬಳೆಗಳಿದ್ದವು. ಚಿನ್ನಾಭರಣಕ್ಕಾಗಿ ಕೊಲೆ ಆಗಿರಬಹುದು ಎಂದು ಪುತ್ರ ಶಂಕಿಸಿದಾ, ಹಾಸನ ನಗರ ಸೇರಿದಂತೆ ಹೊಳೆನರಸಪುರ, ಚನ್ನರಾಯಪಟ್ಟಣ ಹಾಗೂ ಶಾಂತಿಗ್ರಾಮದ ಕೆಲವು ಚಿನ್ನದ ಗಿರವಿ ಅಂಗಡಿಗಳಲ್ಲಿ ಚಿನ್ನವನ್ನು ಅಡ ಇಟ್ಟಿರಬಹುದು ಎಂಬ ಸಂಶಯದ ಮೇಲೆ ಪೊಲೀಸರು ಹುಡುಕಾಟ ನಡೆಸುತ್ತಾರೆ.
ಟ್ವಿಸ್ಟ್ ಕೊಟ್ಟವನೇ ಚಾಣಾಕ್ಷ ಹಂತಕ: ಪ್ರಕರಣದಲ್ಲಿ ಮಹೇಶನ ಮೇಲೆ ಆರೋಪ ಮಾಡಿದ್ದ ಅದೇ ಗ್ರಾಮದ ರಾಜು ಅಲಿಯಾಸ್ ಮಧುರಾಜು (24) ಮೇಲೆ ಪೊಲೀಸರಿಗೆ ಅನುಮಾನ ಬರುತ್ತೆ. ಈತ ಕುಡುಕ ಮತ್ತು ಚಿನ್ನಾಭರಣಕ್ಕಾಗಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿ ಕಾರ್ಯಾಚರಣೆಗೆ ಇಳಿಯುತ್ತಾರೆ. ಆಗ ರಾಜುಗೆ ಕರೆ ಮಾಡಿ, ಮಹೇಶ ಬಾಯಿ ಬಿಡುತ್ತಿಲ್ಲ, ಅವನನ್ನು ಡಾಬಾಗೆ ಕರೆದುಕೊಂಡು ಬಾ, ಕುಡಿಸಿ ಸತ್ಯ ಬಾಯಿ ಬಿಡಿಸೋಣ ಎಂದು ಪೊಲೀಸರು ಸೂಚಿಸುತ್ತಾರೆ. ಇದನ್ನು ನಂಬಿ ಬಂದ ರಾಜುಗೆ ಪೊಲೀಸರು ಬಲೆ ಹಾಕಿದ್ದಾರೆ. ಆ ಬಳಿಕ ರಾಜು ಪ್ರಕರಣದ ಇಂಚಿಂಚು ಮಾಹಿತಿ ಹೊರಹಾಕಿದ್ದಾನೆ.
ಜಮೀನು ವ್ಯಾಜ್ಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ರತ್ನಮ್ಮನ ಕೊಲೆ ಪ್ರಕರಣದಲ್ಲಿ ಅದೇ ಗ್ರಾಮದ ಮಧುರಾಜ್ (24) ಕೊಲೆ ಮಾಡಿ ರಾಜಾರೋಷವಾಗಿ ಗ್ರಾಮದಲ್ಲಿ ತಿರುಗಾಡಿಕೊಂಡಿದ್ದ. ಪೊಲೀಸರು ಬಂದಾಗಲೂ ಕೂಡ ವಿಚಲಿತನಾಗದೇ, ಮತ್ತೊಬ್ಬನ ಮೇಲೆ ಆರೋಪ ಮಾಡಿ ತನ್ನ ಪಾಡಿಗೆ ತಾನಿದ್ದ. ಕೊಲೆಯಾದ ರತ್ನಮ್ಮ ಹಾಗೂ ಮಹೇಶ ಸಂಬಂಧಿಕರು. ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ಆಗಿದ್ದನ್ನ ಆರೋಪಿ ಮಧುರಾಜ್ ಗಮನಿಸಿ, ಪ್ರಕರಣ ಮಹೇಶ ಮೇಲೆ ಎತ್ತಿಹಾಕಲು ಯತ್ನಿಸಿದ್ದ. ಆದ್ರೆ ಕೊನೆಗೆ ತಾನೇ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ಭೇದಿಸಿದ ತಂಡಕ್ಕೆ ಎಸ್‌ಪಿ ಹರಿರಾಮ ಶಂಕರ್ ಅವರು 20 ಸಾವಿರ ನಗದು ಬಹುಮಾನ ವಿತರಿಸಿದ್ದಾರೆ.
ಇದನ್ನೂ ಓದಿ:ರಾಯಚೂರಲ್ಲಿ ಯುವಕನ ಬರ್ಬರ ಕೊಲೆ: ರಕ್ತಸಿಕ್ತ ಮೃತದೇಹ ಕಂಡು ಬೆಚ್ಚಿಬಿದ್ದ ಜನರು