ಹಾಸನ : ಕೊರೊನಾ 2ನೇ ಅಲೆ ತಡೆಯಲು ರಾಜ್ಯ ಸರ್ಕಾರ ಹೇರಿದ್ದ ವಾರಾಂತ್ಯ ಕರ್ಫ್ಯೂ ನಗರದಲ್ಲಿ ಯಶಸ್ವಿಯಾಗಿದೆ.
ಬೆಳಗ್ಗೆ 10 ಗಂಟೆಯವರೆಗೂ ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿತ್ತು. 10ರ ನಂತರ ಸಂಪೂರ್ಣ ಅನಗತ್ಯವಾಗಿ ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿದ್ದ ದ್ವಿಚಕ್ರ ಹಾಗೂ ಖಾಸಗಿ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.
ವಾರಾಂತ್ಯ ಕರ್ಫ್ಯೂವಿಗೆ ಬೆಂಬಲ ಸೂಚಿಸಿದ ಸಾರ್ವಜನಿಕರು.. ವಾಹನ ಚಾಲಕರು ಅನೇಕ ಕಾರಣ ಮತ್ತು ದಾಖಲೆ ನೀಡಿ ಸಂಚಾರ ಮಾಡುತ್ತಿದ್ದರು. ಇನ್ನು, ಕೆಲವರು ಪೊಲೀಸರ ಜೊತೆ ವಾಗ್ವಾದಕ್ಕೆ ಮುಂದಾಗುತ್ತಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ಅವರು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಅನಗತ್ಯ ವಾಹನ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದರು.
ಕೆಲವರು ತುರ್ತು ಸೇವೆ ಎಂಬ ವಿವಿಧ ರೀತಿಯ ಆಸ್ಪತ್ರೆ ರಶೀದಿ, ಚುಚ್ಚುಮದ್ದಿನ ಪ್ಯಾಕೆಟ್, ಮದುವೆ ಆಮಂತ್ರಣ ಪತ್ರ, ಹೀಗೆ ಹಲವು ದಾಖಲಾತಿಗಳನ್ನು ನೀಡುವ ಮೂಲಕ ಸಂಚಾರ ಮಾಡುತ್ತಿದ್ದದ್ದು ಕಂಡು ಬಂತು. ಅದನ್ನು ಹೊರತುಪಡಿಸಿದರೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ತೆರೆದಿದ್ದವು.
ಸರ್ಕಾರಿ ರಜೆಯ ಕಾರಣ ವಾಹನಗಳ ಸಂಚಾರವೂ ವಿರಳವಾಗಿತ್ತು. ಇದರ ನಡುವೆ ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ದಂಡ ಹಾಕುವುದಷ್ಟೆ ಅಲ್ಲದೇ, ವಾಹನಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯಿತು.
ಪೊಲೀಸರ ಕಣ್ತಪ್ಪಿಸಿ ಕೆಲವು ಅಂಗಡಿ, ಟೀ ಕ್ಯಾಂಟೀನ್ಗಳನ್ನು ತೆರೆದಿದ್ದ ವ್ಯಾಪಾರಸ್ಥರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು.
ಓದಿ:ವೀಕೆಂಡ್ ಕರ್ಫ್ಯೂ ಬಳಿಕ ನಾಳೆಯ ವಾತಾವರಣ ಹೇಗಿರಲಿದೆ? ಸಚಿವ ಅಶೋಕ್ ಹೇಳಿದ್ದಿಷ್ಟು