ಹಾಸನ: ಜಿಲ್ಲಾ ಹಾಲು ಒಕ್ಕೂಟವು 2019-20ನೇ ಸಾಲಿನಲ್ಲಿ 1450 ಕೋಟಿ ರೂ. ವಹಿವಾಟಿನಲ್ಲಿ 36 ಕೋಟಿ ರೂ. ತೆರಿಗೆ ಪೂರ್ವ ನಿವ್ವಳ ಲಾಭ ಗಳಿಸಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.
ನಗರದ ಹಾಸನ ಹಾಲು ಉತ್ಪಾದಕ ಘಟಕದಲ್ಲಿ ನೂತನ ಮೆಗಾ ಡೈರಿಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟದ ಹಾಲಿನ ಶೇಖರಣೆ ಗರಿಷ್ಠ 11.50 ಲಕ್ಷ ಲೀಟರ್ಗಳಾಗಿದ್ದು, ಶೇ. 12ರಷ್ಟು ಹೆಚ್ಚಾಗಿದೆ. ಹೀಗಾಗಿ ಹಾಸನ ಹಾಲು ಒಕ್ಕೂಟವು 3ನೇ ಸ್ಥಾನದಿಂದ ಎರಡನೇ ಸ್ಥಾನ ಗಳಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಹಾಲಿನ ಶೇಖರಣೆ ಹೆಚ್ಚಳದಿಂದ ಪರಿವರ್ತನೆಗೆ ಕಳುಹಿಸುತ್ತಿರುವ ಹಾಲನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 40 ಲಕ್ಷ ಲೀಟರ್ ಸಾಮರ್ಥ್ಯದ ಯು.ಹೆಚ್.ಟಿ. ಘಟಕ, 20 ಸಾವಿರ ಲೀಟರ್ ಸಾಮರ್ಥ್ಯದ ಐಸ್ ಕ್ರೀಂ ಘಟಕ ಕಾರ್ಯಾರಂಭ ಮಾಡಿದ್ದು, ಪ್ರಸ್ತುತ ದಿನಕ್ಕೆ 10 ಲಕ್ಷ ಲೀಟರ್ ಸಾಮರ್ಥ್ಯದ ಪ್ರತಿ ಗಂಟೆಗೆ 30,000 ಪೆಟ್ ಬಾಟಲ್ ಸಾಮರ್ಥ್ಯವಿರುವ ಯು.ಹೆಚ್.ಟಿ. ಸುವಾಸಿತ ಹಾಲಿನ ಘಟಕವನ್ನು ಸ್ಥಾಪನೆ ಮಾಡುತ್ತಿದೆ ಎಂದು ತಿಳಿಸಿದರು.
ಹೆಚ್.ಡಿ.ರೇವಣ್ಣ, ಮಾಜಿ ಸಚಿವ ಹಾಸನ ಹಾಲು ಒಕ್ಕೂಟದಿಂದ ಸದ್ಯದಲ್ಲಿಯೇ ಅತ್ಯಾಧುನಿಕ ಗಣಕೀಕೃತ ತಂತ್ರಜ್ಞಾನವುಳ್ಳ 4ನೇ ಪೆಟ್ ಬಾಟಲ್ ಘಟಕವು 2021ರ ಜನವರಿಯಲ್ಲಿ ಕಾರ್ಯಾರಂಭಿಸಲಿದೆ. ಪ್ರಸ್ತುತ ದೇಶದಾದ್ಯಂತ 3 ಯು.ಹೆಚ್.ಟಿ. ಪೆಟ್ ಬಾಟಲ್ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಗುಜರಾತ್ ರಾಜ್ಯದಲ್ಲಿ ಅಮೂಲ್ ಬ್ರಾಂಡ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿ (ಯು.ಹೆಚ್.ಟಿ ಪೆಟ್ ಬಾಟಲ್) ಘಟಕವನ್ನು ಹಾಸನ ಹಾಲು ಒಕ್ಕೂಟದಲ್ಲಿ ನಿರ್ಮಿಸಲಾಗುತ್ತಿದ್ದು, ಅತ್ಯಾಧುನಿಕ ಗಣಕೀಕೃತ ತಂತ್ರಜ್ಞಾನವುಳ್ಳ 4ನೇ ಪೆಟ್ ಬಾಟಲ್ ಘಟಕವಾಗಿರುವುದು ಹೆಮ್ಮೆಯ ವಿಷಯವಾಗಿರುತ್ತದೆ ಎಂದರು.
ಹಾಲು ಉತ್ಪಾದಕರು ಉತ್ಪಾದಿಸುವ ಹೆಚ್ಚುವರಿ ಹಾಲಿಗೆ ಮಾರುಕಟ್ಟೆ ಒದಗಿಸಿ ಉತ್ಪಾದಕರಿಗೆ ಉತ್ತಮ ದರ ನೀಡುವಲ್ಲಿ ಈ ಯೋಜನೆಯು ಸಹಕಾರಿಯಾಗಿರುತ್ತದೆ. ರೂ. 165 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಪ್ರತಿ ಗಂಟೆಗೆ 30 ಸಾವಿರ, ದಿನವೊಂದಕ್ಕೆ 5 ಲಕ್ಷದ 40 ಸಾವಿರ ಬಾಟಲ್ ಉತ್ಪಾದಿಸುವ ಸಾಮಾರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಲ್ಲಿ ಸಂಕೀರ್ಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ಸ್ವಯಂಚಾಲಿತ ಯಂತ್ರೋಪಕರಣ ಅಳವಡಿಸಿಕೊಳ್ಳಲಾಗಿರುತ್ತದೆ. ಈ ಯಂತ್ರೋಪಕರಣಗಳು ಇಟಲಿ, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ತಯಾರಾಗಿದ್ದು, ಘಟಕವು ಜನವರಿ-2021ರ ಅಂತ್ಯದ ವೇಳೆಗೆ ವಾಣಿಜ್ಯ ಉತ್ಪಾದನೆ ಪ್ರಾರಂಭಿಸಲಿದೆ ಎಂದರು.