ಹಾಸನ:ಜಗತ್ತಿನಾದ್ಯಂತ ಮಹಾಮಾರಿ ಕೊರೊನಾ ಹಲವರ ಬದುಕನ್ನೇ ಕಿತ್ತುಕೊಂಡಿದೆ. ಮಾರಕ ಸೋಂಕು ತಗುಲಿ ಪೋಷಕರಿಂದ ಮಕ್ಕಳು, ಮಕ್ಕಳಿಂದ ಪೋಷಕರು ದೂರಾದ ಅನೇಕ ನಿದರ್ಶನಗಳಿವೆ. ಕೆಲವರ ಸಂಬಂಧಗಳನ್ನು ದೂರ ಮಾಡಿದೆ. ತಾಯಿ ಸತ್ತರೂ ಮಗ ನೋಡಲು ಸಾಧ್ಯವಾಗದ ಪರಿಸ್ಥಿತಿಯನ್ನು ತಂದೊಡ್ಡಿದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ 'ಸತ್ತು ಹೋಗಿದ್ದಾನೆ' ಎಂದುಕೊಂಡಿದ್ದ ಮಗ ವಾಪಸ್ ಮನೆಗೆ ಬಂದಿದ್ದು, ಹೆತ್ತವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
20 ವರ್ಷಗಳ ಬಳಿಕ ವಾಪಸ್ ಮನೆಗೆ ಬಂದ ವ್ಯಕ್ತಿ.. ವಿವರ:
ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮದ ನಿವಾಸಿ ಶೇಖರ್ 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇವರು ಇಲ್ಲಿನ ನಿವಾಸಿಗಳಾದ ರಾಜೇಗೌಡ ಮತ್ತು ಅಕ್ಕಯಮ್ಮ ದಂಪತಿಯ ಹಿರಿಯ ಪುತ್ರ. ಯಾವುದೋ ವೈಮನಸ್ಯದಿಂದ 16ನೇ ವಯಸ್ಸಿನಲ್ಲಿ ದೂರಾಗಿದ್ದು, ಮಗನಿಗಾಗಿ ಪೊಷಕರು ಸಾಕಷ್ಟು ಹುಡುಕಾಡಿದ್ದಾರೆ. ಪೊಲೀಸ್ ಠಾಣೆಗೆ ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೊಂದಿನ ಮಗ ಸಾವಿಗೀಡಾಗಿರಬಹುದು ಎಂದೇ ನಿರ್ಧಾರಕ್ಕೆ ಬರುತ್ತಾರೆ.
ಆದರೆ ಇದ್ದಕ್ಕಿದ್ದಂತೆ ಮಗ ವಾಪಸ್ ಮನೆಗೆ ಬಂದಾಗ ಹೆತ್ತವರ ಖುಷಿಗೆ ಪಾರವೇ ಇರಲಿಲ್ಲ. ಎರಡು ದಶಕಗಳ ಬಳಿಕ ತಮ್ಮ ಇಳಿ ವಯಸ್ಸಿನಲ್ಲಿ ಮಗ ಬಂದನಲ್ಲ ಎಂಬ ಖುಷಿಯಲ್ಲಿ ಅವರಿದ್ದಾರೆ.
ಮನೆ ಬಿಟ್ಟು ಹೋದ ಶೇಖರ್ ಬೆಂಗಳೂರಿನಲ್ಲಿ ಸ್ವಲ್ಪ ದಿನ ಇದ್ದು, ನಂತರ ಮುಂಬೈ ಕಡೆ ಮುಖ ಮಾಡಿದ್ದರಂತೆ. ಅಲ್ಲಿಂದ ದುಬೈಗೆ ಪಯಣ ಬೆಳೆಸಿ, ವಾಪಸ್ ಗುಜರಾತ್ ಮಧ್ಯಪ್ರದೇಶ ಹೀಗೆ ನಾನಾ ಭಾಗಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕಳೆದ 23 ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಪಾನಿಪುರಿ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದರು.
ಆದರೆ ಕೊರೊನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ವ್ಯವಹಾರ ಹದಗೆಟ್ಟಿದೆ. ಹಾಗಾಗಿ ಶೇಖರ್ ವಾಪಸ್ ತನ್ನ ಮನೆಗೆ ಮರಳಿದ್ದಾರೆ. ಒಟ್ಟಿನಲ್ಲಿ ದೇಶದ ಜನರ ಲಕ್ಷಾಂತರ ಮಂದಿಯ ಬಾಳಿನಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನಾ ಇವರ ಕುಟುಂಬದಲ್ಲಿ ಖುಷಿಯ ಡೋಲು ಬಾರಿಸಿದೆ.
ಇದನ್ನೂ ಓದಿ:ಜಾನಪದ ಶೈಲಿಯಲ್ಲಿ ಹಾಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸಪ್ಪ