ಹಾಸನ : ಜಿಲ್ಲೆಯಲ್ಲಿಂದು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಈ ಮೂಲಕ ಚುನಾವಣೆಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಸನದಲ್ಲಿ ಹಾಲಿ ಶಾಸಕ ಪ್ರೀತಂ ಗೌಡ ನಾಮಪತ್ರ ಸಲ್ಲಿಸಿದ್ರೆ, ಜೆಡಿಎಸ್ ಪಕ್ಷದ ವತಿಯಿಂದ ಹೆಚ್.ಪಿ.ಸ್ವರೂಪ್ ನಾಮಪತ್ರ ಸಲ್ಲಿಸಿದರು. ಚೆನ್ನರಾಯಪಟ್ಟಣದಿಂದ ಜೆಡಿಎಸ್ನ ಬಾಲಕೃಷ್ಣ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಕೆಆರ್ಎಸ್ ಪಕ್ಷದಿಂದ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದರು. ಪ್ರಜಾಕೀಯ ಪಕ್ಷದಿಂದ ಕಿರಣ್ ಟಿ.ಕೆ.ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಎಎಪಿ ಪಾರ್ಟಿಯಿಂದ ಮಂಜೇಗೌಡ ನಾಮಪತ್ರವನ್ನು ಸಲ್ಲಿಸಿದರು.
ಬಿಜೆಪಿಯಿಂದ ವಕೀಲ ದೇವರಾಜೇಗೌಡ ನಾಮಪತ್ರ: ಹೊಳೆನರಸೀಪುರದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒಂದೇ ದಿನ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಮ್ಮ ಪತ್ನಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರೆ, ಅದೇ ರೀತಿ ಬಿಜೆಪಿಯಿಂದ ವಕೀಲ ದೇವರಾಜೇಗೌಡ ನಾಮಪತ್ರ ಸಲ್ಲಿಸಿದರು.
ಬೇಲೂರಲ್ಲಿ ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಬಾರಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಮಗದೊಮ್ಮೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ರೆ, ಮಾಜಿ ಸಚಿವ ಬಿ.ಶಿವರಾಂ ಕಾಂಗ್ರೆಸ್ ಪಕ್ಷದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಅರಕಲಗೂಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದು, ಬಿಜೆಪಿಯಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಯೋಗಾರಮೇಶ್ ಹಾಗೂ ಜೆಡಿಎಸ್ ಪಕ್ಷದಿಂದ ಎ ಮಂಜು ಪತ್ನಿ ತಾರಾರೊಂದಿಗೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣನೊಂದಿಗೆ ಪ್ರತ್ಯೇಕವಾಗಿ ಎರಡು ನಾಮಪತ್ರ ಸಲ್ಲಿಸಿದರು.