ಹಾಸನ: ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಹೆಚ್. ಡಿ. ರೇವಣ್ಣ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿದ್ದು ಕಂಡುಬಂತು.
ಹಾಸನ: ಸಿಡಿಓ ವಿರುದ್ಧ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಾಸನ ಜನತಾ ಬಜಾರ್ ಸೊಸೈಟಿ ಚುನಾವಣೆ ವಿಷಯದಲ್ಲಿ ಸಿಡಿಓ ಸುನೀಲ್ ಕಾನೂನು ಪಾಲನೆ ಮಾಡುತ್ತಿಲ್ಲ. ಈ ತಿಂಗಳು 18 ಮತ್ತು 25ರ ಒಳಗೆ ಜನತಾಬಜಾರ್ ಚುನಾವಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ. ಆದರೆ, ಚುನಾವಣೆಗೆ ಸಂಬಂಧಿಸಿದ ಯಾವುದೇ ನೋಟಿಫಿಕೇಷನ್ಅನ್ನು ಇನ್ನೂ ಕೂಡ ನೀಡಿಲ್ಲ ಎಂದು ದೂರಿದರು.
ದುರುದ್ದೇಶಪೂರ್ವಕವಾಗಿ ಚುನಾವಣೆ ತಡವಾಗುವಂತೆ ಸುನೀಲ್ ಮಾಡುತ್ತಿದ್ದಾರೆ ಎಂಬ ಶಂಕೆ ಮೂಡುತ್ತಿದೆ. ಅವರು ಬಿಜೆಪಿಗೆ ಅಧಿಕಾರ ದೊರಕಿಸಿಕೊಡಲು ಈ ರೀತಿ ವರ್ತಿಸುತ್ತಿದ್ದಾರೆ. ಅವರು ಕೋರ್ಟ್ ಸೂಚನೆ ಮೀರಿ ಒಂದು ಪಕ್ಷಕ್ಕೆ ಕೆಲಸ ಮಾಡುತ್ತಿರುವುದಾಗಿ ಮಾಜಿ ಸಚಿವ ರೇವಣ್ಣ ಆರೋಪಿಸಿದರು.
ಸುನೀಲ್ ಹಲವಾರು ಸೊಸೈಟಿಗಳಿಗೆ ಚುನಾವಣೆ ಅಧಿಕಾರಿಯಾಗಿದ್ದಾರೆ. ಈಗಾಗಲೇ ಇವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಇದೆ. ಆದರೆ, ಈತನ ಪತ್ನಿ ಭಾನು ಲೋಕಾಯುಕ್ತದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು, ತಮ್ಮ ಪತ್ನಿ ಮೂಲಕ ಪೊಲೀಸರನ್ನು ಹೆದರಿಸಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ಸುನೀಲ್ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆ ಕೂಡಲೇ ಸುನೀಲ್ ವಿರುದ್ಧ ತನಿಖೆ ಆಗಬೇಕು. ಕೋರ್ಟ್ ಆರ್ಡರ್ ಪ್ರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.