ಹಾಸನ: ಲಾಕ್ಡೌನ್ ವ್ಯವಸ್ಥೆ ಬಿಗಿಗೊಳಿಸಿ ತಡೆ ಹಿಡಿಯಲಾಗಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದರು.
ಹೆಚ್.ಕೆ. ಕುಮಾರಸ್ವಾಮಿ ಸುದ್ದಿಗೋಷ್ಟಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಕೋವಿಡ್ -19 ಸಂಖ್ಯೆ ಹೆಚ್ಚಾಗುತ್ತಿದ್ದು, ಲಾಕ್ ಡೌನ್ ವ್ಯವಸ್ಥೆಯನ್ನು ಬಿಗಿ ಗೊಳಿಸಬೇಕು. ಆದ್ರೆ ತಡೆ ಹಿಡಿಯಲಾಗಿರುವ ಅಭಿವೃದ್ಧಿ ಕಾಮಗಾರಿಯನ್ನು ಸಂಪೂರ್ಣ ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸುವಂತೆ ಆಗ್ರಹಿಸಿದರು.
ರೈತರಿಗೆ ಆಲೂಗಡ್ಡೆ ಬಿತ್ತನೆ ಮಾಡಲು ಉತ್ತಮ ಬೀಜ ತರಿಸಿ, ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಕೂಡಲೇ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೆ ತಂದು ಈಗ ಅವಶ್ಯಕತೆಯ ವ್ಯಾಪಾರ ಮಾಡಲು ಕೆಲ ವ್ಯವಹಾರವನ್ನು ಸಡಿಲಿಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಜಿಲ್ಲೆಯಲ್ಲಿರುವ ದೂರದ ಸ್ಥಳದವರನ್ನು ಅವರವರ ಸ್ಥಳಕ್ಕೆ ಸಾಗಿಸುವ ಕೆಲಸ ಮಾಡಬೇಕು ಎಂದರು.
ರೈತರ ಬೆಳೆಯನ್ನು ಮಾರಾಟ ಮಾಡಲು ಸೂಕ್ತ ಅವಕಾಶ ನೀಡಬೇಕು. ಇಲ್ಲಿವರೆಗೂ ಅವರಿಗಾಗಿರುವ ನಷ್ಟವನ್ನು ಸರ್ಕಾರ ಭರಿಸಲಿ. ಲಾಕ್ ಡೌನ್ ಆದೇಶದ ಹೆಸರಿನಲ್ಲಿ ಇಂದು ಅಭಿವೃದ್ಧಿಯ ಕೆಲಸದ ಅನುದಾನ ನಿಲ್ಲಿಸಿದ್ದಾರೆ. ಇರುವ ವೈದ್ಯಾಧಿಕಾರಿಗಳನ್ನು ಕಾಯಂ ಮಾಡಿ, ಅವರ ವೃತ್ತಿ ಹಣವನ್ನು ಸರಿಯಾಗಿ ನೀಡಿ, ಖಾಲಿ ಇರುವ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು ಎಂದರು.
ಇನ್ನು ದಂತ ವೈದ್ಯರನ್ನು ನೇಮಕ ಮಾಡಿಕೊಂಡಿರುವುದಿಲ್ಲ, ಈಗ ಆಯಾಷ್ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಏಪ್ರಿಲ್ ತಿಂಗಳ ಒಳಗೆ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಆರೋಗ್ಯ ಸಚಿವರಾದ ಶ್ರೀರಾಮಲು ರವರು ಹೇಳಿಕೆ ನೀಡಿದ್ದು, ಕೊರೊನಾ ಹಿನ್ನೆಲೆ ತಡವಾಗಿರಬಹುದು. ಲಾಕ್ ಡೌನ್ ವಾಪಸ್ ಪಡೆದ ನಂತರವಾದರೂ ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರಿಗೆ ದಿನ ಭತ್ಯೆ ನೀಡಿ, ಈಗ ಕೊಡುತ್ತಿರುವ ಗೌರವ ಧನ ಹೆಚ್ಚಿಸಲಿ. ಕಳೆದ ಆರು ತಿಂಗಳಿನಿಂದ ಪಿಂಚಣಿ ಹಣ ಬಾಕಿ ಇದ್ದು, ಕೂಡಲೇ ಹಣ ಬಿಡುಗಡೆ ಮಾಡಿ ಸರಿಪಡಿಸಬೇಕು. ಪಡಿತರ ವಿತರಣೆಯಲ್ಲಿ ಬರೀ ಅಕ್ಕಿ ಕೊಡುವ ಬದಲು ಬೇಳೆ, ಸಕ್ಕರೆ, ಎಣ್ಣೆ ಹಾಗೂ ದಿನ ನಿತ್ಯ ಬಳಸುವ ಪದಾರ್ಥಗಳನ್ನು ನೀಡಲಿ ಎಂದು ಸಲಹೆ ನೀಡಿದರು. ಸರ್ಕಾರವು ರಾಜ್ಯದಲ್ಲಿ 29 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿರುವಂತೆ ಹಣ ಬಿಡುಗಡೆ ಮಾಡಲು ಒತ್ತಾಯಿಸಿದರು.