ಅರಕಲಗೂಡು:ತನಗೆ ಮತ್ತು ಆರು ವರ್ಷದ ಮಗಳಿಗೆ ಕೊರೊನಾ ಸೋಂಕು ತಗುಲಿದ್ದರೂ ನಿಗಾವಹಿಸದೆ ಹೋಂ ಕ್ವಾರಂಟೈನ್ ನೆಪದಲ್ಲಿ ಆರೋಗ್ಯ ಇಲಾಖೆ ಮನೆಗೆ ಕಳಿಸಿದೆ ಎಂದು ತಾಲೂಕಿನ ಮಳಲಿಕೆರೆ ಕೊಪ್ಪಲಿನ ಮಹಿಳೆಯೊಬ್ಬರು ಆಳಲು ತೋಡಿಕೊಂಡಿದ್ದಾರೆ.
ಸೋಂಕಿತರಿಗೆ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ವ್ಯವಸ್ಥೆ ಇದ್ದರೆ ಮಾತ್ರ ಹೋಂ ಕ್ವಾರಂಟೈನ್ ಚಿಕಿತ್ಸೆ ಪಡೆಯಲು ಅವಕಾಶವಿದೆ. ಅದರೆ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮೀಣ ಪ್ರದೇಶಗಳೇ ಇರುವುದರಿಂದ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ಇಲ್ಲ. ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನಮ್ಮ ಬಗ್ಗೆ ನಿರ್ಲಕ್ಷ್ಯವಹಿಸಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಅಳಲು ತೋಡಿಕೊಂಡ ಸೋಂಕಿತ ಮಹಿಳೆ ಸೋಂಕಿತ ಮಹಿಳೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿ ಅಥವಾ ಶೌಚಾಲಯ ಇಲ್ಲ. ಮೂವರು ಹೆಣ್ಣು ಮಕ್ಕಳು ಮತ್ತು 60 ವರ್ಷ ತಾಯಿ ಇವರ ಜೊತೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ಸೋಂಕಿತ ಮಹಿಳೆಯೇ ಮನೆಯವರಿಗೆಲ್ಲ ಅಡುಗೆ ಮಾಡಿ ಕೊಡುತ್ತಿದ್ದಾರೆ. ಹೀಗಾದರೆ, ಮನೆಯ ಇತರ ಸದಸ್ಯರಿಗೂ ಸೋಂಕು ಹರಡುವುದಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಸೋಂಕು ತಗುಲಿದ ಮೇಲೆ ಮನೆ ಕಡೆಗೆ ಯಾರೂ ತಲೆ ಹಾಕುತ್ತಿಲ್ಲ. ಆಶಾ ಕಾರ್ಯಕರ್ತೆಯರು ಕೂಡ ಯೋಗಕ್ಷೇಮ ವಿಚಾರಿಸಿ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ. ಕೂಲಿ ಕೆಲಸ ಮಾಡಿ ಬದುಕುವ ನಮ್ಮ ಗೋಳು ಕೇಳುವವರು ಯಾರೂ ಎಂದು ಮಹಿಳೆ ತನ್ನ ಸಂಕಷ್ಟ ತೋಡಿಕೊಂಡಿದ್ದಾಳೆ.