ಕರ್ನಾಟಕ

karnataka

ETV Bharat / state

ಕೇವಲ 3 ಮತಗಳಿಂದ ಸೊಸೆಗೆ ಸೋಲುಣಿಸಿದ ಅತ್ತೆ: ಹಾಸನದಲ್ಲಿ ಜೆಡಿಎಸ್‌ ಬೆಂಬಲಿಗರ ಮೇಲುಗೈ! - hassan gram panchayat election result roundup

ಹಾಸನ ತಾಲೂಕಿನ ಹನ್ನೊಂದು ಗ್ರಾಮ ಪಂಚಾಯತಿಗಳ ಮತ ಎಣಿಕೆ ಕಾರ್ಯ ಮುಕ್ತಾಯವಾಗಿ ಫಲಿತಾಂಶ ಹೊರಬಿದ್ದಿದ್ದು, ಯಾರು ಯಾರು ಜಯ ಗಳಿಸಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಾಚರಣೆ
ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಾಚರಣೆ

By

Published : Dec 31, 2020, 8:52 AM IST

ಹಾಸನ: ಗ್ರಾಮ ಪಂಚಾಯತ್​ ಚುನಾವಣೆ ಮತ ಎಣಿಕೆ ಕಾರ್ಯ ಎಂಟು ತಾಲೂಕುಗಳಲ್ಲೂ ಶಾಂತಿಯುತವಾಗಿ ಬುಧವಾರ ರಾತ್ರಿ ಮುಕ್ತಾಯಗೊಂಡಿದೆ. ಜಿಲ್ಲೆಯ 245 ಗ್ರಾಮ ಪಂಚಾಯಿತಿಗಳ 3,351 ಕ್ಷೇತ್ರಗಳಿಗೆ ಸದಸ್ಯರನ್ನು ಮತದಾರರು ಆಯ್ಕೆ ಮಾಡಿದ್ದಾರೆ.

ಆಯಾ ತಾಲೂಕಿನ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡು, ರಾತ್ರಿ ಮುಕ್ತಾಯಗೊಂಡಿತು. ಅವಿರೋಧವಾಗಿ ಆಯ್ಕೆಯಾದ 376 ಸ್ಥಾನಗಳನ್ನು ಹೊರತುಪಡಿಸಿ, ಒಟ್ಟು 3,351 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನವಾಗಿತ್ತು. 7,908 ಅಭ್ಯರ್ಥಿಗಳು ಕಣದಲ್ಲಿದ್ದರು.

ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಾಚರಣೆ

ಹಲವು ಪಂಚಾಯತಿಗಳಲ್ಲಿ ಹೊಸಬರು ಆಯ್ಕೆಯಾದರೆ, ಕೆಲವು ಕಡೆ ಹಳಬರಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಕೆಲವರದ್ದು ನಿರೀಕ್ಷಿತ ಗೆಲುವಾದರೆ ಮತ್ತೆ ಕೆಲವು ಕಡೆ ಅಚ್ಚರಿಯ ಫಲಿತಾಂಶ ಹೊರ ಹೊಮ್ಮಿತು. ಮೊದಲ ಬಾರಿಗೆ ಸ್ಪರ್ಧಿಸಿದ್ದ ಡಿವೈಎಫ್ಐ ಜಿಲ್ಲಾಧ್ಯಕ್ಷ ವಾಸುದೇವ್ ಅವರು ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮ ಪಂಚಾಯತಿಯಿಂದ, ಸಕಲೇಶಪುರದ ಆಕ್ಸ್ ಫರ್ಡ್ ಶಾಲೆಯ ದೈಹಿಕ ಶಿಕ್ಷಕ ಹೆಚ್.ಆರ್. ಸುದರ್ಶನ್ ಅವರು ವಳಲಹಳ್ಳಿ ಗ್ರಾಮ ಪಂಚಾಯತಿಯಿಂದ ಹಾಗೂ ಎಂಬಿಎ ಪದವೀಧರ ಮದನ್ ಅವರು ಮಳಲಿ ಗ್ರಾಮ ಪಂಚಾಯತಿಯ ಚೊಚ್ಚಲ ಗೆಲುವು ದಾಖಲಿಸಿದ್ದಾರೆ.

ಹಾಸನ ತಾಲೂಕಿನ ಹನ್ನೊಂದು ಗ್ರಾಮ ಪಂಚಾಯತಿಗಳ ಮತ ಎಣಿಕೆ ಸರ್ಕಾರಿ ಕಾಲೇಜಿನಲ್ಲಿ ನಡೆಯಿತು. ಕಾಲೇಜು ಮುಂಭಾಗ ಹಾಗೂ ಸುತ್ತಮುತ್ತ ಅಭ್ಯರ್ಥಿಗಳ ಬೆಂಬಲಿಗರು ಜಮಾಯಿಸಿದ್ದರು. ಆರ್.ಸಿ ರಸ್ತೆ, ಸಾಲಗಾಮೆ ರಸ್ತೆ, ಎಂ.ಜಿ ರಸ್ತೆ ಹಾಗೂ ಕಲಾ ಕಾಲೇಜು ಪ್ರವೇಶ ದ್ವಾರದಲ್ಲಿ ಹೂವಿನ ಹಾರ ಹಿಡಿದು ತಮ್ಮ ಬೆಂಬಲಿತ ಅಭ್ಯರ್ಥಿಯ ಫಲಿತಾಂಶಕ್ಕಾಗಿ ಕಾದು ನಿಂತಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಜೊತೆಗೆ ಸಿಡಿಸಲು ತಂದಿದ್ದ ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದರು.

ಗೆದ್ದವರನ್ನ ಹೊತ್ತು ಕುಣಿಸಿದ ಬೆಂಬಲಿಗರು:

ಕಾಲೇಜು ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಅಭ್ಯರ್ಥಿ ಹಾಗೂ ಏಜೆಂಟ್​ಗಳಿಗೆ ಕಾಲೇಜು ಮೈದಾನದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ವಿಜೇತ ಅಭ್ಯರ್ಥಿಗಳ ಹೆಸರು ಘೋಷಿಸುತ್ತಿದ್ದಂತೆ ಬೆಂಬಲಿಗರು ಶಿಳ್ಳೆ, ಜೈಕಾರ ಹಾಕಿ ಸಂಭ್ರಮಿಸಿದರು. ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತು ಕುಣಿದಾಡಿದರು.

ಇನ್ನು ಹಾಸನ ತಾಲೂಕಿನಲ್ಲಿ ವಿಜೇತ ಅಭ್ಯರ್ಥಿಗಳ ವಿವರವನ್ನು ನೋಡುವುದಾದರೇ, ಜಾಗರವಳ್ಳಿ ಗ್ರಾಮ ಪಂಚಾಯತಿ ಮಲ್ಲೇನಹಳ್ಳಿ ಕ್ಷೇತ್ರದಿಂದ ಭಾರತಿ ಮತ್ತು ವೆಂಕಟೇಶ್, ಹೊಸೂರು ಕ್ಷೇತ್ರದಿಂದ ನಂಜೇಗೌಡ, ರಾಜಶೇಟ್ಟಿ (ಅವಿರೋಧ), ಜ್ಯೋತಿ, ಜಾಗರವಳ್ಳಿ ಕ್ಷೇತ್ರದಿಂದ ಪೂರ್ಣಿಮಾ (ಅವಿರೋಧ), ರಾಮಮ್ಮ, ಬಿ.ಜೆ.ಮಾರನಹಳ್ಳಿ ಕ್ಷೇತ್ರದಿಂದ ನವೀನ್ ಕುಮಾರ್, ಅಶೋಕ, ಮಲಗೋಡನಹಳ್ಳಿ ಕ್ಷೇತ್ರದಿಂದ ನಂಜಮ್ಮ, ಪಾರ್ವತಮ್ಮ ಆಯ್ಕೆಯಾದರು.

ಕಬ್ಬಳ್ಳಿ ಗ್ರಾಮ ಪಂಚಾಯತಿಯ ಕಬ್ಬಳ್ಳಿ ಕ್ಷೇತ್ರದಿಂದ ಯಶೋಧ, ಜಿ.ಎಸ್.ಉಮೇಶ್, ಮಹದೇವರಹಳ್ಳಿ ಕ್ಷೇತ್ರದಿಂದ ಹೊನ್ನೇಗೌಡ, ಮಂಜಯ್ಯ, ಮುದ್ಲಾಪುರ ಕ್ಷೇತ್ರದಿಂದ ಟಿ.ಸಿ. ರಂಜಿತ, ಮುದ್ಲಾಪುರ ಕ್ಷೇತ್ರದಿಂದ ಹೊನ್ನೇಗೌಡ, ಹಳೇಕೊಪ್ಪಲು ಕ್ಷೇತ್ರದಿಂದ ಎಸ್.ಎಲ್. ರಜನಿ, ಸೋಮನಹಳ್ಳಿ ಕ್ಷೇತ್ರದಿಂದ ಕಲಾ, ಎಸ್.ಎಸ್. ಪುಟ್ಟರಾಜು, ಜೆ. ಪೂಜಾ, ಸೋಮನಹಳ್ಳಿ ಕ್ಷೇತ್ರದಿಂದ ಸಿ.ಟಿ. ಮಂಜುಳ ಈ ನಾಲ್ಕು ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿದೆ.

ಬಸವಾಘಟ್ಟ ಗ್ರಾಮ ಪಂಚಾಯತಿಯ ಬಸವಾಘಟ್ಟ ಕ್ಷೇತ್ರದ ಎರಡು ಸ್ಥಾನಗಳಿಗೆ ಶ್ರೀಧರ, ಎಂ.ಹೆಚ್. ಸುನಂದ, ಬಿ. ಬೈರಾಪುರ ಕ್ಷೇತ್ರದಿಂದ ಪುಟ್ಟಲಕ್ಷ್ಮಮ್ಮ ಹಾಗೂ ಮಂಜೇಗೌಡ (ಅವಿರೋಧ), ಬಿ.ಬೈರಾಪುರ ಕ್ಷೇತ್ರದಿಂದ ಸನಂದ, ಎಂ.ಜಿ. ಗೀತಾ (ಅವಿರೋಧ) ಸಿದ್ಧಾಪುರ ಕ್ಷೇತ್ರದಿಂದ ವಿಜಯಲಕ್ಷ್ಮಿ, ಗಂಗಾಧರ, ಕಿತ್ತನಕೆರೆ ಕ್ಷೇತ್ರದಿಂದ ಸಹನ ಮತ್ತು ಕೆ.ಎಸ್. ಮಹಲಿಂಗಸ್ವಾಮಿ, ತಿಮ್ಮನಹಳ್ಳಿ ಕ್ಷೇತ್ರದಿಂದ ಕೆ.ಎಲ್. ನಾಗರಾಜ, ಚಿಗಟಿಹಳ್ಳಿ ಕ್ಷೇತ್ರದಿಂದ ಬಸವರಾಜು (ಅವಿರೋಧ) ಆಯ್ಕೆಯಾಗಿದ್ದಾರೆ.

ಶಂಕರನಹಳ್ಳಿ ಗ್ರಾಮ ಪಂಚಾಯತಿಯ ಅಣ್ಣಿಗನಹಳ್ಳಿ ಕ್ಷೇತ್ರದ ರತ್ನಮ್ಮ, ಬಿದರಕೆರೆ ಕ್ಷೇತ್ರದಿಂದ ರಾಮಕೃಷ್ಣ, ಬಿ.ಎಚ್. ಕೃಷ್ಣಕುಮಾರ್, ಗಾಡೇನಹಳ್ಳಿ ಕ್ಷೇತ್ರದಿಂದ ವೇಣುಗೋಪಾಲ್, ಜಿ.ಟಿ. ರಾಮೇಗೌಡ, ಶಂಕರನಹಳ್ಳಿ ಕ್ಷೇತ್ರದಿಂದ ಜೆ.ಡಿ. ಜಯಂತಿ, ಎಸ್.ಕೆ. ಚಿಕ್ಕೇಗೌಡ, ಕಾವ್ಯ ರಕ್ಷಿತ್, ಗೋಳೇನಹಳ್ಳಿ ಕ್ಷೇತ್ರದಿಂದ ಮಂಜುಳಮ್ಮ, ಮೀನಾಕ್ಷಮ್ಮ, ಇಂದ್ರಮ್ಮ, ಜವೇನಹಳ್ಳಿ ಕ್ಷೇತ್ರದಿಂದ ಜೆ.ಸಿ. ಶಶಿಧರ, ಶ್ವೇತಾ, ಮಲ್ಲಿಗೆವಾಳು ಕ್ಷೇತ್ರದಿಂದ ಎಂ.ಎಚ್. ಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ.

ಬೈಲಹಳ್ಳಿ ಗ್ರಾಮ ಪಂಚಾಯಿತಿ ಛತ್ರನಹಳ್ಳಿ ಕ್ಷೇತ್ರದಿಂದ ಗಣೇಶ್, ಎ.ಟಿ. ನಂದಿನಿ, ಕಮಲಮ್ಮ. ಬೈಲಹಳ್ಳಿ ಕ್ಷೇತ್ರದಿಂದ ನೀಲಮ್ಮ, ಬಿ.ಟಿ. ಪ್ರೇಮ, ಟಿ.ರಾಜು, ಕಾಳತಮ್ಮನಹಳ್ಳಿ ಕ್ಷೇತ್ರದಿಂದ ಸೀತಮ್ಮ, ಎ.ಪಿ. ಆಶಾ, ಕಲ್ಲಹಳ್ಳಿ ಕ್ಷೇತ್ರದಿಂದ ಎ.ಎಸ್. ಉಮೇಶ್, ಕ್ಯಾತನಹಳ್ಳಿ ಕ್ಷೇತ್ರದಿಂದ ವಿನೋದ (ಅವಿರೋಧ), ಎನ್. ಹರೀಶ್, ಕುಮಾರ, ವರ್ತಿಕೆರೆ ಕ್ಷೇತ್ರದಿಂದ ವಿ.ಎಸ್. ಬೂದೇಶ ಆಯ್ಕೆಯಾಗಿದ್ದಾರೆ.

ಕಣ್ಣೀರಿಟ್ಟ ಪರಾಜಿತ ಅಭ್ಯರ್ಥಿ:

ಬೇಲೂರು ತಾಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಕುಮಾರ್ ಸೋಲಿನಿಂದ ಬೇಸರಗೊಂಡು ಕಣ್ಣೀರಿಡುತ್ತಾ ಎಣಿಕೆ ಕೇಂದ್ರದಿಂದ ಹೊರ ಬಂದರು. ಅವರ ಬೆಂಬಲಿಗರು ಸಮಾಧಾನ ಪಡಿಸಲು ಯತ್ನಿಸಿದರು.

ಸೊಸೆಗೆ ಸೋಲುಣಿಸಿದ ಅತ್ತೆ...

ಹಾಸನ ತಾಲೂಕಿನ ಹೆರಗು ಗ್ರಾಮ ಪಂಚಾಯತಿ ಹೆಚ್.ಬೈರಾಪುರ ಕ್ಷೇತ್ರದಲ್ಲಿ ಸೋದರ ಅತ್ತೆ-ಸೊಸೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸೊಸೆ ಪವಿತ್ರಾಳನ್ನು ಅತ್ತೆ ಸೊಂಬಮ್ಮ ಸೋಲಿಸಿದ್ದಾರೆ. ಸೊಂಬಮ್ಮ 276 ಮತ, ಪವಿತ್ರಾಗೆ 273 ಮತ ಲಭಿಸಿತು. ಅಭ್ಯರ್ಥಿಯೊಬ್ಬರು ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರಿಂದ ಸೋತ ಅಭ್ಯರ್ಥಿ ಪರ ಮರು ಮತ ಎಣಿಕೆಗೆ ಆಗ್ರಹಿಸಿದರು. ನಂತರ ಮರು ಮತ ಎಣಿಕೆ ನಡೆಯಿತು.

ಇನ್ನು ಮತ ಎಣಿಕೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸನ ತಹಶೀಲ್ದಾರ್ ಸತ್ಯನಾರಾಯಣ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಸ್ತುವಾರಿ ನೋಡಿಕೊಂಡರು.

ABOUT THE AUTHOR

...view details