ಹಾಸನ:ಜಿಲೆಟಿನ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮೂರನೆಯ ವ್ಯಕ್ತಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ನಟರಾಜ್ ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗುವ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಏ. 4ರಂದು 2:30 ರಲ್ಲಿ ಜಿಲೆಟಿನ್ ಸ್ಫೋಟಗೊಂಡು ಸಂಪತ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟಗೊಂಡ ಮಾರನೇ ದಿನ ರವಿಕುಮಾರ್ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡಿದ್ದ ನಟರಾಜ್ ಪ್ರಕರಣವಾದ ಐದು ದಿನದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೊಳೆನರಸಿಪುರ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಜಿಲೆಟಿನ್ ಸ್ಫೋಟಗೊಂಡಿದ್ದ ಪ್ರಕರಣ ಇದಾಗಿದ್ದು, ಗಾಯಗೊಂಡವರು ಸಾವಿಗೀಡಾಗುವ ಮೂಲಕ ರಾಜ್ಯದ ಅತಿ ದೊಡ್ಡ ಮೂರನೇ ಪ್ರಕರಣ ಇದಾಗಿದೆ.
ಇಂಥ ದೊಡ್ಡ ಪ್ರಕರಣ ನಡೆದರೂ ಕೂಡ ಪೊಲೀಸ್ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಕ್ರಷರ್ ಮಾಲೀಕರು ಮತ್ತೆ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ಮಾಲೀಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಕರಣದಿಂದ ಮೂರು ಮಂದಿ ಮೃತಪಟ್ಟರೂ ಕೂಡ ಯಾರೊಬ್ಬ ಕ್ರಷರ್ ಮಾಲೀಕರಾಗಲಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿಲ್ಲ. ಸ್ಫೋಟ ಪ್ರಕರಣಕ್ಕೆ ಮಾಲೀಕರು ಯಾರೂ ಕಾರಣರಲ್ಲ. ಮಾಲೀಕರಿಗೆ ಗೊತ್ತಾಗದಂತೆ ಕೆಲಸ ಮಾಡಲು ಹೊರಟಿದ್ದರು ಎಂದು ಬಿಂಬಿಸಲು ಪೊಲೀಸರು ಮುಂದಾಗಿದ್ದಾರೆ ಎಂಬುದು ಮೃತರ ಕುಟುಂಬಸ್ಥರ ಆರೋಪವಾಗಿದೆ.
ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಹೀಗಾಗಿ ನಾವು ಕ್ರಷರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ನಮಗೆ ನ್ಯಾಯ ಕೊಡಿಸಬೇಕು ಎಂದು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.