ಹಾಸನ:ಆರ್ಟಿ-ಪಿಸಿಆರ್ ಪರೀಕ್ಷೆ ಆದ 4-5 ದಿನದ ಬಳಿಕ ರಿಸಲ್ಟ್ ಬರುತ್ತಿದೆ. ಇದರಿಂದಲೂ ಸೋಂಕು ಹೆಚ್ಚಾಗುತ್ತದೆ. ಕಳೆದ ಒಂದು ತಿಂಗಳಲ್ಲಿ ನಾಲ್ಕು ಸಭೆಗಳನ್ನು ಮಾಡಿದ್ದೇನೆ. ಜಿಲ್ಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಇಂತಹ ಗಂಭೀರ ವಿಚಾರವನ್ನು ನನ್ನ ಗಮನಕ್ಕೆ ತರಬೇಕು ಅಂತ ಗೊತ್ತಾಗಿಲ್ಲವೇ?. ತಿಂಗಳಾದರೆ ಸಂಬಳ ತೆಗೆದುಕೊಳ್ಳುವುದಕ್ಕೆ ಗೊತ್ತಾಗುತ್ತೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಗರಂ ಆದರು.
ಹಾಸನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕೋವಿಡ್ 2ನೇ ಅಲೆಯ ತುರ್ತು ಜಿಲ್ಲಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಸಚಿವರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಿಯಾದ ಔಷಧಿ ಸರಬರಾಜಾಗುತ್ತಿಲ್ಲ. ಔಷಧಿಗಳ ಕೊರತೆ, ಬೆಡ್ಗಳ ಕೊರತೆ, ರೆಮ್ಡಿಸಿವಿರ್ ಕೊರತೆ ಇದೆ ಎಂದು ಹೇಳೋದಿಕ್ಕೆ ನಿಮಗೆ ನಾಚಿಕೆ ಆಗಲ್ವಾ. ಏನು ಕೆಲಸ ಮಾಡುತ್ತಿದ್ದೀರಾ ನೀವು. ಸರ್ಕಾರ ನಿಮಗೆ ಎಲ್ಲಾ ಸವಲತ್ತುಗಳನ್ನು ಕೊಟ್ಟಿದೆ. ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಬರುತ್ತಿಲ್ಲವಲ್ಲ. ನಿಮ್ಮಿಂದ ಶಾಸಕರು ನಮ್ಮ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ಕೆಂಡಾಮಂಡಲವಾದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿಮ್ಸ್ ಅಧಿಕಾರಿ, ನಮಗೆ ಪ್ರತಿನಿತ್ಯ 3000 ಪರೀಕ್ಷೆ ಮಾಡಲು ಅವಕಾಶವಿದ್ದು, ಪರೀಕ್ಷೆ ನಡೆಸಲು ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಪರೀಕ್ಷೆ ಮಾಡುವುದು ನಿಮ್ಮ ಜವಾಬ್ದಾರಿ. ಸ್ವಾಬ್ ಟೆಸ್ಟ್ ಮಾಡಲು ಸಿಬ್ಬಂದಿ ಇಲ್ಲ ಎಂದರೆ ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ ಸಂಬಂಧಪಟ್ಟ ಸಿಬ್ಬಂದಿಯನ್ನು ಪಡೆದುಕೊಂಡು ಮಾಡಿಸಿ. ಇಲ್ಲ ಎಂದರೆ ನಮ್ಮ ಜಿಲ್ಲೆ ಸ್ಮಶಾನ ಆಗುತ್ತದೆ ಎಂದು ಗುಡುಗಿದರು.