ಹಾಸನ: ನಮ್ಮ ಗ್ರಾಮ ವಾಸ್ತವ್ಯ ಇಡೀ ರಾಜ್ಯಕ್ಕೆ ಮಾದರಿಯಾಗಲಿದ್ದು, ಬೇರೆ ಅಧಿಕಾರಿಗಳಿಗೆ ಚಳಿ ಹತ್ತಿಕೊಳ್ಳಲಿದೆ. ಇದು ಬೇರೆ ಅಧಿಕಾರಿಗಳಿಗೂ ಮಾದರಿ ಆಗಲಿ ಅಂತ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆ ತಾಲೂಕಿನ ಜಯಚಾಮರಾಜಪುರ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಮತ್ತು ಸಿಎಂ ಹೆಚ್ಡಿಕೆ ಗ್ರಾಮ ವಾಸ್ತವ್ಯಕ್ಕೂ ಮುನ್ನ ಅವರ ತವರು ಜಿಲ್ಲೆ ಹಾಸನದಲ್ಲಿ ಡಿಸಿ ಅಕ್ರಂ ಪಾಷ ಮತ್ತು ಗೃಹ ಮಂಡಳಿ ಅಧ್ಯಕ್ಷ ವಾಸ್ತವ್ಯ ಶುರು ಮಾಡಿದ್ದಾರೆ. ಅರಸೀಕೆರೆ ತಾಲೂಕಿನ ಜೆ.ಸಿ. ಪುರದ ಬಿಸಿಎಂ ಹಾಸ್ಟೆಲ್ನಲ್ಲಿ ವಾಸ್ತವ್ಯ ಹೂಡುವ ಮೂಲಕ ಸಿಎಂ ವಾಸ್ತವ್ಯ ಕಾರ್ಯಕ್ರಮಕ್ಕೂ ಮುನ್ನ ನಾಂದಿ ಹಾಡಿದ್ದಾರೆ.
ಗ್ರಾಮ ವಾಸ್ತವ್ಯ ವೇಳೆ ನಡೆದ ಸಭೆಯಲ್ಲಿ ಮಾತನಾಡಿದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನ ಜಿಲ್ಲಾಧಿಕಾರಿಯ ಗ್ರಾಮವಾಸ್ತವ್ಯ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಅರಸೀಕೆರೆಯ ಜೆ.ಸಿ.ಪುರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಬೇರೆ ಅಧಿಕಾರಿಗಳಿಗೆ ಚಳಿ ಹತ್ತಿಕೊಳ್ಳಲಿದೆ. ಇದು ಬೇರೆ ಅಧಿಕಾರಿಗಳಿಗೂ ಮಾದರಿ ಆಗಲಿ. ಈ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯವನ್ನು ಮಾಧ್ಯಮದವರು ಹೇಳಿದ್ರೆ ಮಾತ್ರ ಬೇರೆ ಕಡೆಗೆ ಗೊತ್ತಾಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಗ್ರಾಮ ವಾಸ್ತವ್ಯ ಮಾಡಲು ಆಗಮಿಸಿದ ಗೃಹ ಮಂಡಳಿ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿಗಳಿಗೆ ಗ್ರಾಮದ ನೂರಾರು ಮುತ್ತೈದೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಬಳಿಕ ಗ್ರಾಮದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನಾಗರಿಕರಿಂದ ಕೃಷಿ, ತೋಟಗಾರಿಕೆ, ಆರೋಗ್ಯ, ಚೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆ ಆಲಿಸಿದರು.
ಹಾಸನ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಗ್ರಾಮ ವಾಸ್ತವ್ಯ ವೇಳೆ ಮಾತನಾಡಿದ ಡಿಸಿ ಅಕ್ರಂ ಪಾಷಾ, ಜನರ ಬಳಿಗೆ ಹೋಗಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಗೆ ಹರಿಸುವುದು ಈ ಕಾರ್ಯಕ್ರಮದ ಆಶಯ. ಸ್ಥಳೀಯ ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಅತ್ಯಂತ ಆಸಕ್ತಿಯಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶೀಘ್ರದಲ್ಲೇ ಅರಸೀಕೆರೆ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಪೂರೈಕೆಯಾಗಲಿದೆ. ಮಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಅಗತ್ಯ ನೆರವು, ಸಹಕಾರ ನೀಡಲಾಗುವುದು ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಗಳನ್ನು ಶೀಘ್ರವಾಗಿ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದರು.
ಇಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಅದಕ್ಕೆ ಮಾನ್ಯತೆ ನೀಡಬೇಕು. ಇದು ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸು. ಇದು ಕರ್ನಾಟಕದ ಇತಿಹಾಸದಲ್ಲಿ ಅತ್ಯುತ್ತಮ ಪ್ರಯತ್ನ ಎಂದು ಅವರು ಹೇಳಿದರು.
ಒಟ್ಟಾರೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೂ ಮುನ್ನ ಹಾಸನದ ಜಿಲ್ಲಾಧಿಕಾರಿ ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಗ್ರಾಮವಾಸ್ತವ್ಯವನ್ನೇನೋ ಮಾಡಿ ಸ್ಥಳೀಯರಿಂದ ಸಮಸ್ಯೆಯನ್ನ ಆಲಿಸಿ ಅಹವಾಲು ಸ್ವೀಕರಿಸಿದ್ದಾರೆ. ಬಂದಿರುವ ಅಹವಾಲುಗಳಿಗೆ ಮುಂದಿನ ದಿನದಲ್ಲಿ ಪರಿಹಾರ ಸಿಗುತ್ತಾ ಅಥವಾ ಕಸದ ಬುಟ್ಟಿ ಸೇರುತ್ತಾ ಎಂಬುದನ್ನ ಕಾದು ನೋಡಬೇಕಿದೆ.