ಸಕಲೇಶಪುರ (ಹಾಸನ):ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಎಚ್ಚರಿಸಿದರು. ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮರಳು ತನಿಖಾ ಠಾಣೆಗೆ ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ವೇಳೆ ತನಿಖಾ ಠಾಣೆಯಲ್ಲಿ ಯಾರೂ ಇಲ್ಲದಿದ್ದರಿಂದ ಹಿರಿಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಲಾಯಿತು. ಈ ವೇಳೆ ಕಲ್ಲು ಸಾಗಣೆ ಮಾಡಲು ಪರವಾನಗಿ ಪತ್ರ ಇಟ್ಟುಕೊಳ್ಳದೆ ಕೇವಲ ಮೊಬೈಲ್ ವಾಟ್ಸಪ್ನಲ್ಲಿ ಲಾರಿ ಚಾಲಕರು ಪರವಾನಗಿ ಪ್ರತಿ ತೋರಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಪರವಾನಗಿ ಪ್ರತಿ ಇಟ್ಟುಕೊಂಡು ಕಲ್ಲು ಸಾಗಣೆ ಮಾಡುವಂತೆ ಹೇಳಿದರು.
ಬೆಳಗೋಡು ಹೋಬಳಿಯ ನಾಡ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಗಿರೀಶ್ ಅನಿರೀಕ್ಷಿತವಾಗಿ ಬೆಳಗೋಡು ಹೋಬಳಿಯ ನಾಡ ಕಚೇರಿಗೆ ಭೇಟಿ ನೀಡಿದ ಅವರು, ಕಡತ ಪರಿಶೀಲನೆ ಮಾಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಜಮೀನು ವಿವಾದ, ವಿಧವಾ ವೇತನ ಹಾಗೂ ಇನ್ನಿತರ ಸರ್ಕಾರಿ ಸೇವೆಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನಾಡ ಕಚೇರಿಯಲ್ಲಿ ಯುಪಿಎಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯುತ್ ಇಲ್ಲದ ವೇಳೆ ಆನ್ಲೈನ್ ಕಾರ್ಯಗಳಿಗೆ ವ್ಯತ್ಯಯ ಆಗುತ್ತಿದೆ. ಆ ಭಾಗದಲ್ಲಿ ಬಡ ಕೂಲಿ ಕಾರ್ಮಿಕರು ಹಾಗೂ ರೈತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ವಿದ್ಯುತ್ ಇಲ್ಲದ ವೇಳೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡರು.
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ ರಾಜಸ್ವ ನಿರೀಕ್ಷರಾಗಿ ಮಹೇಂದ್ರ ಅವರನ್ನು ವರ್ಗಾವಣೆ ಮಾಡಿರುವ ಕುರಿತು ಜಿಲ್ಲಾಧಿಕಾರಿಗಳು ಮಾತನಾಡಿ, ಮಹೇಂದ್ರ ಅವರ ಮೇಲೆ ಹೆಚ್.ಆರ್.ಪಿ.ಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವುದರಿಂದ ಅವರ ವರ್ಗಾವಣೆಯನ್ನು ಸರ್ಕಾರ ತಡೆ ಹಿಡಿದಿದೆ ಎಂದು ತಿಳಿಸಿದರು.