ಹಾಸನ: ನಾಲ್ಕು ಗುಂಪುಗಳಾಗಿ ಕಾಡಾನೆ ವಿವಿಧ ಕಡೆ ಸಂಚಾರ ಮಾಡುತ್ತಿದ್ದು, ದಾಳಿ ಮಾಡಿದ ಕಡೆ ಮತ್ತೆ ಅದೇ ಆನೆಗಳುಬಂದು ದಾಳಿ ಮಾಡಿರುವ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಮುಂದಾಗಿದ್ದೇವೆ. ಕಾಡಾನೆ ಹಾವಳಿ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿರುವ ರಾಜ್ಯ ಸರಕಾರವು ಅಧಿಕಾರಿಗಳನ್ನು ನೇಮಿಸಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಬಸವರಾಜ್ ತಿಳಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ್ದ ಸಭೆಯಲ್ಲಿ ಆನೆ ಹಾವಳಿ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚಿಸಿ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳವಾಗಿರುವುದರಿಂದ ಇದನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫಾಂಟ್ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳನ್ನು ನೇಮಿಸುವ ಮೂಲಕ ಕಾರ್ಯತತ್ಪರವಾಗಿದೆ ಎಂದರು.
ಟಾಸ್ಕ್ ಫೋರ್ಸ್ನಲ್ಲಿ ಯಾರಿರುತ್ತಾರೆ? ಈ ಟಾಸ್ಕ್ ಫೋರ್ಸ್ ನಲ್ಲಿ ಓರ್ವ ವಲಯ ಅರಣ್ಯಾಧಿಕಾರಿ, 4 ಮಂದಿ ಉಪ ವಲಯ ಅರಣ್ಯಾಧಿಕಾರಿಗಳು, 8 ಮಂದಿ ಅರಣ್ಯ ರಕ್ಷಕರು, ಮತ್ತು 32 ಮಂದಿ ಹೊರಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಜೂನ್- ಜುಲೈ ತಿಂಗಳಲ್ಲಿ ಸೆರೆ ಹಿಡಿದ ಮಕ್ನಾ ಕಾಡಾನೆ ಇದೀಗ ಗಿರೀಶ್ ಎಂಬುವರ ಮನೆ ಮೇಲೆ ಮತ್ತೆ ದಾಳಿ ಮಾಡಿದ್ದು, ದಾಳಿಯ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಭಾರತ ಸಂಶೋಧನಾ ಹಾಗೂ ವಿಜ್ಞಾನ ಸಂಸ್ಥೆಯ ವಿಜ್ಞಾನಿಯಾದ ನಿಶಾಂತ್ ಅವರ ನೇತೃತ್ವದಲ್ಲಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಅವರ ವರದಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದು ಡಿಎಫ್ಒ ತಿಳಿಸಿದರು.