ಹಾಸನ:ಕೇಂದ್ರ ಸರ್ಕಾರ ಚುನಾವಣಾ ಆಯೋಗದ ನಿರ್ದೇಶನದಂತೆ 2021ಜನವರಿ 1ಕ್ಕೆ 18 ವರ್ಷ ಪೂರೈಸುವ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಹಾಗೂ ಅನರ್ಹರನ್ನು ಕೈಬಿಡಲು ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಡೆಯಲಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಮುನ್ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಯಾವುದಾದರು ಮತಗಟ್ಟೆಯಲ್ಲಿ 1200 ಕ್ಕಿಂತ ಹೆಚ್ಚು ಮತದಾರರಿದ್ದರೆ ಅಥವಾ 2 ಕಿ.ಲೋ. ಮೀಟರ್‌ಗಿಂತ ಹೆಚ್ಚಿನ ಅಂತರವಿದ್ದರೆ ಅಂತಹ ಸ್ಥಳಗಳಲ್ಲಿ ಹೊಸ ಮತಗಟ್ಟೆಯನ್ನು ಸ್ಥಾಪಿಸಲು ಅವಕಾಶವಿದೆ ಹಾಗಾಗಿ ಅಂತಹ ಕೋರಿಕೆಗಳಿದ್ದರೆ ಮನವಿ ಸಲ್ಲಿಸಬಹುದಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ 2,3 ನೋಂದಣಿಗಳಿದ್ದಲ್ಲಿ, ಅವುಗಳನ್ನು ತೆಗೆದುಹಾಕಬೇಕು. ಈಗಾಗಲೇ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಚಟುವಟಿಕೆ ಪ್ರಾರಂಭವಾಗಿದ್ದು, ಬೂತ್ ಲೆವೆಲ್ ಆಫೀಸರ್‌ಗಳು ಮನೆ ಮನೆಗೆ ಭೆಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. 2021ರ ಜನವರಿ 15ಕ್ಕೆ ಅಂತಿಮ ಮತಪಟ್ಟಿಯನ್ನು ತಯಾರು ಮಾಡಲಾಗುತ್ತದೆ ಹಾಗಾಗಿ ರಾಜಕೀಯ ಪಕ್ಷಗಳು ಇದಕ್ಕೆ ಸಹಕರಿಸಬೇಕು ಎಂದು ಕೋರಿದರು.
ಚುನಾವಣಾ ಆಯೋಗದ ಉಲ್ಲೇಖಿತ ಪತ್ರಗಳ ನಿರ್ದೇಶನದನ್ವಯ ನಿಗದಿ ಪಡಿಸಲಾಗಿರುವ ವೇಳಾಪಟ್ಟಿಯಂತೆ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ 2016ರ ಮತದಾರರ ಪಟ್ಟಿಗಳ ಕೈಪಿಡಿಯಂತೆ ಅಗತ್ಯ ಸೂಚನೆಗಳನ್ನು ಪಾಲಿಸಿಕೊಂಡು ಕಾಲ-ಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಕೈಗೊಳ್ಳಲಾಗುವ ಪರಿಷ್ಕರಣೆ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಇಚ್ಛಿಸುವವರು, ಮತದಾರರ ಪಟ್ಟಿಯಿಂದ ವಲಸೆ ಮತದಾರರು, ಮರಣ ಹೊಂದಿರುವ ಮತದಾರರ ಹಾಗೂ ಇತರೆ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲು ಇಚ್ಛಿಸುವವರು, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಇಚ್ಛಿಸುವವರು ತಮ್ಮ-ತಮ್ಮ ಕಾರ್ಯಗಳನ್ನು ಸಂಬಂಧಪಟ್ಟ ಆಯಾ ಮತಗಟ್ಟೆ ಅಧಿಕಾರಿ, ಸಂಬಂಧಪಟ್ಟ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾದಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.