ಹಾಸನ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಿದ್ದು, ಮೆರವಣಿಗೆ ಮೂಲಕ ಗಣೇಶನ ಮೂರ್ತಿ ತರುವುದಾಗಲಿ ಅಥವಾ ನಿಮಜ್ಜನ ಮಾಡುವುದು ಸಂಪೂರ್ಣ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬದ ಆಚರಣೆಗೆ ಅನುಮತಿ ನಗರದ ಅಂಬೇಡ್ಕರ್ ಭವನದಲ್ಲಿ ಗಣೇಶ ಚತುರ್ಥಿ ಆಚರಣೆ ಕುರಿತು ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಜೊತೆಗೆ ಗಣೇಶ ಕೂರಿಸಿರುವ ಸ್ಥಳದಲ್ಲಿ 20 ಜನಕ್ಕಿಂತ ಹೆಚ್ಚಿನ ಜನ ಸೇರಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿರುವವರು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ಸ್ವಯಂಸೇವಕರನ್ನು ಇಡುವ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಒಂದು ಅಥವಾ ಎರಡು ತಿಂಗಳ ವರೆಗೆ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದ ಸಂಘ-ಸಂಸ್ಥೆಗಳು ಒಂದು ಅಥವಾ ಮೂರು ದಿನಗಳಲ್ಲಿ ಗಣೇಶ ಚತುರ್ಥಿ ಮುಕ್ತಾಯ ಮಾಡಲು ಒಪ್ಪಿಗೆ ನೀಡಿದ್ದು, ಎಲ್ಲರೂ ನಿಯಮಾನುಸಾರ ಗಣೇಶ ಹಬ್ಬ ಆಚರಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದಾರೆ. ಈಗಾಗಲೇ ಎಚ್ಚರಿಕೆ ನೀಡಿದ್ದರೂ, ಮತ್ತೆ ಮತ್ತೆ ಮರುಕಳಿಸುತ್ತಿರುವ ಕಾರಣ ಕುಟುಂಬದವರು ಮತ್ತು ಕಲ್ಯಾಣ ಮಂಟಪಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಅನುಸರಿಸುವಂತೆ ತಿಳಿಸಿದರು.