ಹಾಸನ: ಮೋದಿ... ಮೋದಿ...ಮೋದಿ... ದೇಶದಲ್ಲೆಡೆ ಮೋದಿ ಹೆಸರು ವಿರಾಜಮಾನವಾಗಿ ರಾರಾಜಿಸುತ್ತಿದೆ. ಇವತ್ತು ಕೂಡಾ ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೆಸ್ ಸಭೆಯಲ್ಲಿ ಕೇಳಿಬಂದ ಸೌಂಡ್ ಇದು.
ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೆಸ್ ಸಭೆ ಮೈತ್ರಿ ಧರ್ಮ ಪಾಲಿಸಲು ಹೋಗಿ ನಾವು ಮಣ್ಣು ತಿನ್ನುವಂತಾಗಿದೆ. ಈ ಬಾರಿ ಮೋದಿ ಚಾ ಕುಡಿದು ಸುಭದ್ರ ದೇಶ ಕಟ್ಟೋಣ ಅಂತ ಕಾರ್ಯಕರ್ತರು ಒಕ್ಕೊರಲಿನಿಂದ ದನಿಗೂಡಿಸಿದರು.
ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ರಾಜ್ಯದ ನಾಯಕರುಗಳಷ್ಟೆಯಲ್ದೇ, ದೇಶದ ನಾಯಕರುಗಳನ್ನ ಕೂಡಾ ಕರ್ನಾಟಕದ ಮಂಡ್ಯ ಮತ್ತು ಹಾಸನ ಕ್ಷೇತ್ರ ತಿರುಗಿ ನೋಡುವಂತೆ ಮಾಡಿದೆ. ಜೆಡಿಎಸ್ ಭದ್ರಕೋಟೆಯಲ್ಲೀಗ ಮೋದಿ ಹವಾ ಜೋರಾಗಿದೆ.
ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ಅಭ್ಯರ್ಥಿಯನ್ನು ಮಾತ್ರ ಮಾತಾಡೋದಿಕ್ಕೂ ಬಿಡದೇ ಸಭೆಯಿಂದ ಹೊರಕಳಿಸಿದ ಘಟನೆ ನಡೆಯಿತು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಹೊಳೆನರಸೀಪುರ ಕ್ಷೇತ್ರದಲ್ಲಿ ಇವತ್ತು ಮೋದಿ ಕಹಳೆ ಮೊಳಗಿದೆ. ಕ್ಷೇತ್ರದ ದಂಡಿಗನಹಳ್ಳಿ ವ್ಯಾಪ್ತಿಯ ಉದಯಪುರದ ಖಾಸಗಿ ಹೋಟೆಲ್ನಲ್ಲಿ ಕರೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮತ್ತೆ ಮೋದಿ ಕೂಗು ಕೇಳಿ ಬಂದಿದೆ. ನಾವು ಪಕ್ಕಾ ಕಾಂಗ್ರೆಸ್ ಕಟ್ಟಾಳುಗಳು. ಆದ್ರೆ ಮೈತ್ರಿ ಹೆಸರಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಿಲು ನೋಡುತ್ತಿರುವ ಕುಟುಂಬ ರಾಜಕಾರಣದ ವಿರುದ್ಧ ನಾವೆಲ್ಲಾ ಒಂದಾಗಿ ಈ ಬಾರಿ ಮೋದಿ ನಾಯಕತ್ವದಲ್ಲಿ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎ.ಮಂಜುಗೆ ಮತ ಹಾಕ್ತೀವಿ. ಕಾರ್ಯಕರ್ತರಿದ್ರೆ ಪಕ್ಷ. ಇಲ್ಲವಾದ್ರೆ ಕಾಂಗ್ರೆಸ್ ನಾಶಕ್ಕೆ ನೀವೇ ನಾಂದಿ ಮಾಡಿಕೊಳ್ಳುತ್ತೀರಾ ಅಂತ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗದ್ದಲವೆಬ್ಬಿಸಿ ಭಾಷಣ ಮಾಡಲು ಬಂದಿದ್ದ ಬಾಗೂರು ಮಂಜೇಗೌಡರನ್ನ ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.
ಮೈತ್ರಿಯಿಂದ ಈಗಾಗಲೇ ನಾವು ಕಾಂಗ್ರೆಸ್ ಅಸ್ತಿತ್ವವನ್ನ ಕಳೆದುಕೊಂಡಿದ್ದೇವೆ. ಇವತ್ತು ನಾವೆಲ್ಲಾ ಈ ಸಭೆಗೆ ಬಂದಿರೋದು ದೇವೇಗೌಡ್ರ ಕುಟುಂಬದ ವಿರುದ್ಧ ಮತ ಹಾಕಲು. ಈ ಬಾರಿ ನಾವು ಕುಟುಂಬ ರಾಜಕಾರಣ ತೆಗೆಯಬೇಕೆಂದೇ ಪಣ ತೊಟ್ಟಿದ್ದೇವೆ. ಹಾಗಾಗಿ ನಾವು ಎ. ಮಂಜುವನ್ನ ಬೆಂಬಲಿಸುತ್ತೇವೆ ಎಂದಿದ್ದಾರೆ.