ಹಾಸನ: ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಮಸ್ಯೆಯಾಗಬಾರದು ಎಂದು ಜಿಲ್ಲಾಡಳಿತ ವಿನೂತನ ಮಾರ್ಗವಾಗಿ ನಗರದ ಎರಡು ಬಸ್ ನಿಲ್ದಾಣ ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ತರಕಾರಿ ವ್ಯಾಪಾರ ಮಾಡಲು ಮಾರ್ಕ್ ಹಾಕಿ ಸರದಿ ಸಾಲಿನಲ್ಲಿ ಬರಲು ಅವಕಾಶ ಕಲ್ಪಿಸಿದ್ದರೂ ಮಾರ್ಕೆಟ್ ಪ್ರದೇಶದಲ್ಲಿ ಜನ ಜಗುಂಳಿ ಕಂಡು ಬಂದಿತು.
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂತೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ನಂದಿನಿ ಸಂತೆಯಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲದೆ ಗುಂಪು ಗುಂಪಾಗಿ ನಿಂತಿದ್ದನ್ನು ಕಂಡು ಜನರಿಗೆ ಸರತಿ ಸಾಲಿನಲ್ಲಿ ನಿಂತು ತರಕಾರಿ ಕೊಳ್ಳುವಂತೆ ಸೂಚನೆ ನೀಡುತ್ತಾ ಸಾಗಿದ ದೃಶ್ಯ ಕಂಡು ಬಂತು.
ಈ ವೇಳೆ ಸರಿಯಾಗಿ ಮಾಸ್ಕ್ ಧರಿಸದ ಸೌತೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರನ್ನು ಗಮನಿಸಿ ಸ್ವತಃ ತಾವೇ ಅಜ್ಜಿಯ ಮಾಸ್ಕ್ ಸರಿ ಪಡಿಸಿದ ಪ್ರಸಂಗ ಅವರ ಸರಳತೆಗೆ ಸಾಕ್ಷಿಯಾಯಿತು.
ಎಎಸ್ಪಿ ನಂದಿನಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ವೈರಸ್ ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಭೆ ನಡೆಸಿ ನಗರಸಭೆ ಪೌರಾಯುಕ್ತರಿಗೆ ಮಾರ್ಗದರ್ಶನ ನೀಡಿದೆ. ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನರ ನೂಕು ನುಗ್ಗಲೂ ಕಡಿತಗೊಳಿಸುವ ಸಲುವಾಗಿ ಮೂರು ಕಡೆಗೆ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸುವ ಮೂಲಕ ಸಂತೆಗೆ ಬರುವ ಜನಜಂಗುಳಿಯನ್ನು ಹತೋಟಿಗೆ ತರಲಾಗಿದೆ ಎಂದರು.
ಬೆಳಗ್ಗೆ 5 ಗಂಟೆಯಿಂದಲೆ ಸಂತೆಗೆ ಬರುವ ಜನರು ಮಾಸ್ಕ್ ಧರಿಸಬೇಕು, ಅಂತರ ಕಾಪಡಿಕೊಳ್ಳಬೇಕು ಹಾಗೂ ಸರತಿ ಸಾಲಿನಲ್ಲಿ ನಿಲ್ಲುವಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ತರಕಾರಿ, ಅಗತ್ಯ ವಸ್ತು ಖರೀದಿಗೆ ಪ್ರತಿ ಮನೆಯಿಂದ ಒಬ್ಬರು ಮಾತ್ರ ಬಂದು ಖರೀದಿ ಮಾಡಬೇಕು. ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಬರಬಾರದು ಮನೆಯಲ್ಲೇ ಇರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವೈರಸ್ ನಿಯಂತ್ರಣಕ್ಕೆ ಪ್ರತಿ ಮನೆ ಅಥವಾ ಬಡಾವಣೆಗಳಿಗೆ ತರಕಾರಿ ತಲುಪಿಸುವಂತೆ ಆಯುಕ್ತರ ಜೊತೆ ಮಾತನಾಡಲಾಗುವುದು ಎಂದು ತಿಳಿಸಿದರು.