ಹಾಸನ:ಕೇವಲ ಎಂಟುನೂರು ರೂಪಾಯಿಗೆ ಬಾಲ್ಯದ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಜ.18 ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯ ಎಂ.ಎನ್. ಮೂರ್ತಿ (48) ಎಂಬ ವ್ಯಕ್ತಿಯ ಕೊಲೆ ಮಾಡಿ, ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತ್ತು. ಆರಂಭದಲ್ಲಿ ರಾಜಕೀಯ ದ್ವೇಷದಿಂದ ಕೊಲೆ ಮಾಡಿರಬಹುದು ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಇಸ್ಪೀಟ್ ಆಟದಲ್ಲಿ ಕೊಲೆಯಾದ ಮೂರ್ತಿ ವಿರುದ್ಧ ಗೆದ್ದಿದ್ದ ನಾಗರಾಜನ ಮೇಲೆ ಕೊಲೆ ಆರೋಪ ಕೇಳಿ ಬಂದಿದ್ದು, ನಾಗರಾಜ ಪೊಲೀಸರ ಅತಿಥಿಯಾಗಿದ್ದಾನೆ.
800ರೂ.ಗೆ ಕೊಲೆ ಮಾಡಿದ ಸ್ನೇಹಿತ:
ನಾಗರಾಜ ಇಸ್ಪೀಟ್ ಆಟದಲ್ಲಿ ಎಂ.ಎನ್.ಮೂರ್ತಿ ವಿರುದ್ಧ 800.ರೂ ಗೆದ್ದಿದ್ದ. ಆದರೆ ಹಣ ನೀಡದ ಮೂರ್ತಿ ಆಟ ಮುಂದುವರೆಸುವಂತೆ ಒತ್ತಾಯ ಮಾಡುತ್ತಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಮೂರ್ತಿ ಹಾಗೂ ನಾಗರಾಜ ಕೈ ಕೈ ಮಿಲಾಯಿಸಿದ್ರು. ಈ ವೇಳೆ ಸಿಟ್ಟಿನಿಂದ ನಾಗರಾಜ ತನ್ನ ಗೆಳೆಯ ಮೂರ್ತಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ನಂತರ ಶವಕ್ಕೆ ಕಲ್ಲುಕಟ್ಟಿ ಬಾವಿಗೆ ಎಸೆದಿದ್ದ.
ಜ.18 ರಂದು ನಡೆದಿದ್ದ ಪ್ರಕರಣ :
ಜ.18ರಂದು ತೋಟಕ್ಕೋಗಿ ಬರುತ್ತೇನೆಂದು ಹೇಳಿ ಹೋಗಿದ್ದ 48 ವರ್ಷದ ಮೂರ್ತಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಆದ್ರೆ ಬೆಳಗ್ಗೆ ಅದೇ ಗ್ರಾಮದ ಭಾವಿಯಲ್ಲಿ ಆತನ ಮೃತ ದೇಹ ಪತ್ತೆಯಾಗಿತ್ತು. ಹತ್ತಾರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ಗ್ರಾಮಕ್ಕೆ ಆಗಮಿಸಿದ್ದ. ಬಿಜೆಪಿಯ ಪರವಾಗಿ ಪ್ರಚಾರದಲ್ಲಿಯೂ ಧುಮುಕಿದ್ದ. ಅಲ್ಲದೇ ಮೃತ ಮೂರ್ತಿಗೆ ಜೂಜು ಆಡುವ ಚಟವಿತ್ತು. ಅದೇ ಆತನ ಸಾವಿಗೆ ಕಾರಣವಾಗಿದೆ.
ಓದಿ: ಚನ್ನರಾಯಪಟ್ಟಣದ ಯುವಕನ ಹತ್ಯೆಗೆ ನಡೆದಿತ್ತಾ ಮಾಸ್ಟರ್ ಪ್ಲಾನ್; ಕಂಪ್ಲೀಟ್ ಡೀಟೇಲ್ಸ್!
ಸ್ನೇಹಿತನೇ ಶತ್ರುವಾಗಿ ಹೋದ:
ಹಾಗೆ ನೋಡುವುದಾದ್ರೆ ಮೂರ್ತಿಗೆ ಗ್ರಾಮದಲ್ಲಿ ಯಾರೂ ಶತ್ರುಗಳಿರಲಿಲ್ಲ. ಆದರೆ ಪ್ರಕರಣವನ್ನು ಸವಾಲಾಗಿ ಪರಿಗಣಿಸಿದ ಹೊಳೆನರಸೀಪುರ ಪೊಲೀಸರು ಇಡೀ ಗ್ರಾಮದ ಪ್ರತಿಮನೆಗಳಿಗೂ ಭೇಟಿ ನೀಡಿ ಗ್ರಾಮದಿಂದ ಯಾರು ಕಾಲ್ಕಿತ್ತಿದ್ದಾರೆ ಎಂದು ತನಿಖೆ ನಡೆಸಿ, ಊರನ್ನು ಖಾಲಿ ಮಾಡಿದವನೋರ್ವನನ್ನು ಅನುಮಾನದ ಮೇಲೆ ಆತನ ಜಾಡು ಹಿಡಿದು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆಗ ಬಂಧಿತ ನಾಗರಾಜು ತಾನೇ ಕೊಲೆ ಮಾಡಿ ಬಾವಿಯಲ್ಲಿ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.