ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬ ದೇವಾಲಯದ ಬಾಗಿಲನ್ನು ಅಕ್ಟೋಬರ್ 13ರಂದು ತೆರೆಯಲಾಗಿದೆ. ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸಿ, ಜಿಲ್ಲಾಡಳಿತದ ಸಮ್ಮುಖದಲ್ಲಿ ಬಾಗಿಲು ತೆಗೆಯಲಾಯಿತು.
ಹಾಸನ ಶಾಸಕ ಪ್ರೀತಂ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮುಂತಾದವರು ದೇವಾಲಯದ ಬಾಗಿಲು ತೆರೆಯುವ ವೇಳೆ ಉಪಸ್ಥಿತರಿದ್ದರು.ಮೊಟ್ಟ ಮೊದಲ ಬಾರಿಗೆ ಅಚ್ಚುಕಟ್ಟಾಗಿ ಈ ಬಾರಿ ದರ್ಶನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಾಡಿತ್ತು. ಅಲ್ಲದೇ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದೆ.
ಭಕ್ತರ ಸಂಖ್ಯೆಯಲ್ಲಿ ಇಳಿಕೆ: ಪ್ರತಿ ಬಾರಿಯೂ ಹಾಸನಾಂಬ ದರ್ಶನದ ಸಂದರ್ಭದಲ್ಲಿ ಮಳೆಯಾಗುವುದು ಪ್ರತೀತಿ. ಆದರೆ, ಮೊದಲ ಬಾರಿಗೆ ಪ್ರಾರಂಭದ ದಿನವೇ ವರುಣನ ಆರ್ಭಟ ಹೆಚ್ಚಾಗಿದ್ದರಿಂದ ರಾತ್ರಿ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ತೊಂದರೆ ಉಂಟಾಯಿತು. ರಾತ್ರಿ ಸುಮಾರು ಒಂಬತ್ತು ಗಂಟೆಗೆ ಆಗಮಿಸಿದ ವರುಣ, ಶುಕ್ರವಾರ ಮುಂಜಾನೆಯ ತನಕ ಸುರಿದಿದ್ದಾನೆ. ಹೀಗಾಗಿ ದರ್ಶನಕ್ಕೆ ತೊಂದರೆಯಾಗಿದ್ದು, ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂತು.
14 ದಿನ ದೇವಿ ದರ್ಶನ: ಪ್ರತಿ ವರ್ಷ ಏಳರಿಂದ ಒಂಬತ್ತು ದಿನಗಳ ಕಾಲ ದರ್ಶನ ಭಾಗ್ಯ ಕೊಡುತ್ತಿದ್ದ ಹಾಸನಾಂಬೆ, ಈ ಬಾರಿ ಸಾರ್ವಜನಿಕರಿಗೆ 14 ದಿನಗಳ ಕಾಲ ತನ್ನ ದಿವ್ಯ ದರ್ಶನ ನೀಡಲಿದ್ದಾಳೆ. ಈ ಹಿನ್ನೆಲೆ ಭಕ್ತಾದಿಗಳ ಸಂಖ್ಯೆಯು ಕೂಡ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇದ್ದರು. ಆದರೆ ಮಳೆ ಇರುವ ಹಿನ್ನೆಲೆ ಭಕ್ತರು ಹೆಚ್ಚಾಗಿ ದೇವಿ ದರ್ಶನಕ್ಕೆ ಬರುತ್ತಿಲ್ಲ.