ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವಂತಹ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲಿಗೆ ಇಂದು ಜಿಲ್ಲಾಡಳಿತದ ಮೂಲಕ ಅಂತಿಮ ತೆರೆ ಬಿದ್ದಿದೆ. ಬೆ. 10 ಗಂಟೆಯ ನಂತರ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾಡಳಿತದ ಸಮ್ಮುಖದಲ್ಲಿ ಮಧ್ಯಾಹ್ನ 12 ಗಂಟೆ 47 ನಿಮಿಷಕ್ಕೆ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಪ್ರೀತಂಗೌಡ, ಸಿ.ಎನ್. ಬಾಲಕೃಷ್ಣ, ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಸಮ್ಮಖದಲ್ಲಿ ದೇವಿಯ ಗರ್ಭಗುಡಿಯ ಬಾಗಿಲಿಗೆ ಬೀಗಮುದ್ರೆ ಹಾಕಲಾಯಿತು.
ಹಾಸನಾಂಬೆ ದೇಗುಲ ದರ್ಶನ ಸಂಪನ್ನ.. ಮುಂದಿನ ವರ್ಷದ ದರ್ಶನ ಸಮಯ ಇಂದೇ ಘೋಷಣೆ ಈ ಬಾರಿ ಅ.13ರಂದು ತೆರೆದಿದ್ದ ಹಾಸನಾಂಬೆ ಗರ್ಭಗುಡಿ ಬಾಗಿಲು 15 ದಿನಗಳ ದರ್ಶನ ನೀಡಿದ್ದು, ಸಾರ್ವಜಕರಿಗೆ 12 ದಿನಗಳ ಕಾಲ ದರ್ಶನ ಭಾಗ್ಯ ಕರುಣಿಸಲಾಗಿತ್ತು. ಈ ಬಾರಿಯೂ ಲಕ್ಷಾಂತರ ಮಂದಿ ಭಕ್ತರು ದರ್ಶನ ಪಡೆಯುವ ಮೂಲಕ ಕಣ್ತುಂಬಿಕೊಂಡಿದ್ದಾರೆ.
ಇಂದು ಬಾಗಿಲು ಹಾಕಿದರೆ ಮುಂದಿನ ವರ್ಷದ ತನಕ ಬಾಗಿಲನ್ನು ತೆಗೆಯುವುದಿಲ್ಲ. ಬದಲಿಗೆ ಸಿದ್ದೇಶ್ವರ ಸ್ವಾಮಿಯ ದೇವಾಲಯದ ಬಾಗಿಲು ಮಾತ್ರ ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಿರುತ್ತದೆ.
ಮುಂದಿನ ವರ್ಷ 11 ದಿನ ಸಾರ್ವಜನಿಕ ದರ್ಶನ:ಮುಂದಿನ ವರ್ಷ 13 ದಿನಗಳ ಕಾಲ ದರ್ಶನಕ್ಕೆ ಅವಕಾಶವಿದ್ದು 11 ದಿನ ಸಾರ್ವಜನಿಕ ದರ್ಶನ ಹಾಗೂ ಉಳಿದ ಎರಡು ದಿನ ಹಾಸನಾಂಬೆ ವಿಶ್ವರೂಪ ದರ್ಶನ ನೀಡಲಿದ್ದಾಳೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಕಡುಣಿಸುವ ಹಾಸನಾಂಬೆ ದೇವಿ ಕೊನೆಯ ದಿನ ಸಾರ್ವಜನಿಕ ದರ್ಶನ ಇಲ್ಲದಿದ್ದರೂ ಬಂದಿದ್ದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಭಕ್ತ ಸಮೂಹ ಧನ್ಯವಾದ ಅರ್ಪಿಸಿದೆ.
ಇದನ್ನೂ ಓದಿ:ಹಾಸನಾಂಬೆ ದರ್ಶನ ವಿಚಾರ: ಶಾಸಕ ನಾಗೇಂದ್ರ ಬಳಿ ಬಹಿರಂಗ ಕ್ಷಮೆ ಕೇಳಿದ ಪ್ರೀತಂ ಗೌಡ