ಹಾಸನ:ಅ.13ರಿಂದ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಜರುಗಲಿದೆ. ಈ ಬಾರಿ 15 ದಿನ ದೇವಿ ದರ್ಶನ ನೀಡಲಿದ್ದು, ಭಕ್ತರಿಗೆ 13 ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳಿಗೆ ಯಾವ ಸಮಸ್ಯೆ ಆಗದಂತೆ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಾಲಯದ ಬಳಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ದೇವಾಲಯದ ಸಮೀಪ ಯಾವುದೇ ಪಾರ್ಕಿಂಗ್ ಅವಕಾಶವಿಲ್ಲ. ಮಳೆ ಕಾರಣ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡದಂತೆ ಜಿಲ್ಲಾಧಿಕಾರಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಮಳೆಯಿಂದ ಹಾನಿಗೊಳಗಾದ ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ನಗರದ ರೈಲ್ವೆ ನಿಲ್ದಾಣ, ಹೊಸ ಬಸ್ ನಿಲ್ದಾಣದ ಬಳಿ ಎಲ್ಇಡಿ ವ್ಯವಸ್ಥೆ ಮಾಡಲಾಗುವುದು. ಗಣ್ಯವ್ಯಕ್ತಿಗಳಿಗೆ ಪ್ರವೇಶ ಕುರಿತಂತೆ ಕಂದಾಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ ಮಾಡಲು ಆದೇಶ ಮಾಡಲಾಗಿದೆ. ಮಳೆ ಕಾರಣ ನಗರದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿಸಿ, ಅಲ್ಲಿಂದ ನಗರ ಸಾರಿಗೆ ವ್ಯವಸ್ಥೆ ಮಾಡಲು ಸಚಿವರು ತಿಳಿಸಿದರು.