ಹಾಸನ:ಕಳೆದ 10 ದಿನಗಳಿಂದ ನಡೆದ ಹಾಸನಾಂಬ ದರ್ಶನೋತ್ಸವ, ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಹಾಗು ಚಂದ್ರಮಂಡಲೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಪನ್ನಗೊಂಡಿತು.
ಹಾಸನಾಂಭ ಜಾತ್ರಾ ಮಹೋತ್ಸವ ಸಂಪನ್ನ.. ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯ ಬಾಗಿಲನ್ನು ನಿನ್ನೆ (ಶನಿವಾರ) ಮಧ್ಯಾಹ್ನ ಪೂಜಾ ಕೈಂಕರ್ಯಗಳೊಂದಿಗೆ ದೇವಿಗೆ ವಿಧಿ ವಿಧಾನಗಳನ್ನು ನೆರವೇರಿಸಿ ಜಿಲ್ಲಾಡಳಿತದ ಸಮ್ಮುಖದಲ್ಲಿ ಅಂತಿಮ ತೆರೆ ಎಳೆಯಲಾಯಿತು.
ರಾತ್ರಿ 9 ಗಂಟೆಗೆ ಸಿದ್ದೇಶ್ವರ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಬಳಿಕ ರಥದ ಮೇಲ್ಭಾಗದಲ್ಲಿ ಚಂದ್ರನ ಆಕಾರವನ್ನ ನಿರ್ಮಾಣ ಮಾಡಿ, ರಥಕ್ಕೆ ಪೂಜೆ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಾಗು ಇತರ ಹಿಂದೂ ಸಂಘಟನೆಗಳು ಭಗವಾ ಧ್ವಜವನ್ನು ಹಾರಿಸುವ ಮೂಲಕ ಭಕ್ತಿ ಮೆರೆದರು. ಬಳಿಕ ಭಕ್ತರು ತೇರನ್ನು ಎಳೆದು ರಥಕ್ಕೆ, ಹಣ್ಣು ಮತ್ತು ಜವನ ನೀಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ದೇವಾಲಯದ ಮುಂಭಾಗದಿಂದ ಹೊರಟ ರಥೋತ್ಸವ ಚೆನ್ನಕೇಶವ ದೇವಾಲಯ ದೊಡ್ಡ ಗಡಿಬೀದಿ ಬಳಿಕ ಹಾಸನಾಂಬೆಯ ಮೂಲ ಸ್ಥಾನಕ್ಕೆ ಬಂದು ಸಮಾಪ್ತಿಗೊಂಡಿತು. ರಥೋತ್ಸವದಲ್ಲಿ ಭಕ್ತರು ದೇವಿಗೆ ಉಗೆ ಉಗೆ ಎನ್ನುವ ಘೋಷಣೆ ಕೂಗುತ್ತಾ ಭಕ್ತಿಯಲ್ಲಿ ಮಿಂದೆದ್ದರು.