ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಸೋಮಶೇಖರ ಶಿವಚಾರ್ಯ ಶ್ರೀಗಳು ಮಾತನಾಡಿದರು. ಹಾಸನ: ತಾಲೂಕಿನ ಹಳೆಬೀಡು ಶ್ರೀ ಕ್ಷೇತ್ರ ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಶ್ರೀ ಸೋಮಶೇಖರ ಶಿವಚಾರ್ಯ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸ್ವಾಮೀಜಿ ಅವರು ಆತಂಕ ಹೊರಹಾಕಿದ್ದಾರೆ.
ಪುಷ್ಪಗಿರಿ ಮಠದಲ್ಲಿ ಮಂಗಳವಾರ ರಾತ್ರಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಡ್‌ನಲ್ಲಿ ಸಿಗಲಿ ಕೊಚ್ಚಿ ಹಾಕುತ್ತೇವೆ. ಇಲ್ಲಾ ಹೊಡೆದು ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ ಎಂದ ಸ್ವಾಮೀಜಿ, ಭಗವಂತ ಆಯಸ್ಸು ಕಡಿಮೆ ಮಾಡಿ, ಅವರ ಕೈಯಲ್ಲಿ ಹೋಗುವಂತಹ ಅವಕಾಶ ಸಿಕ್ಕರೆ ಅದು ಸ್ವರ್ಗ ಅಂತ ಭಾವಿಸುತ್ತೇವೆ ಎಂದು ತಿಳಿಸಿದರು.
ಹೆದರಿ ಹಿಂದೆ ಓಡಿ ಹೋಗಿ ಸಾಯೋಲ್ಲ:ಬದುಕಿದ್ದಾಗ ವೀರಮರಣ ಸಾವನ್ನಪ್ಪಬೇಕು ಅಂತಾರೆ. ಹೆದರಿ ಹಿಂದೆ ಓಡಿ ಹೋಗಿ ಸಾಯೋಲ್ಲ. ಹೀಗಾಗಿ ಎದುರುಗಡೆ ಕೊಚ್ಚಿಸಿಕೊಂಡು ಹೋದರೆ ನಮಗೆ ಸ್ವರ್ಗ ಸಿಗುತ್ತೆ. ನಾವು ಕೆಲಸ ಮಾಡಿದ್ದೇವೆ, ನಮ್ಮ ಹೆಸರು ಉಳಿಯುತ್ತೆ. ನಮ್ಮ ಹೆಸರಿಗಾಗಿ ಓಡಾಡುವುದು ಏನಿಲ್ಲ. ಸಮಾಜ, ಧರ್ಮಕ್ಕೆ ನನ್ನ ಸೇವೆ ಅಂತ ಭಾವಿಸಿದ್ದೇನೆ.
ಇದು ಎಲ್ಲರಿಗೂ ಬೇಸರ ಆಗಬಹುದು. ಆದರೆ ನಮ್ಮ ನಿಲುವನ್ನ ಹೇಳಲೇಬೇಕು. ವೇದಿಕೆ ಮೀಟಿಂಗ್, ವೈಯುಕ್ತಿಕವಾದರೂ ಹೇಳಲೇಬೇಕಿತ್ತು ತಿಳಿಸುತ್ತಿದ್ದೇನೆ. ಸಣ್ಣ ಸಣ್ಣ ಸಮಾಜಗಳು ಇವತ್ತು ದೊಡ್ಡ ಕ್ರಾಂತಿ ಮಾಡುತ್ತಿವೆ. ಅದನ್ನು ನೋಡಿದ ನಮಗೂ ನಮ್ಮ ಕ್ಷೇತ್ರದಲ್ಲಿ ಏನಾದ್ರೂ ಅದೇ ರೀತಿ ವಿಭಿನ್ನವಾಗಿ ಮಾಡೋಣ ಅನಿಸುತ್ತದೆ. ಆ ಮಾಡುವಂತಹ ಶಕ್ತಿ ಇದೆ. ಆದರೆ ಸಹಕಾರ ಇಲ್ಲದ್ದಕ್ಕಾಗಿ ಸಾಧ್ಯವಾಗುವುದಿಲ್ಲ ಎಂದು ನೋವು ತೋಡಿಕೊಂಡರು.
ಇನ್ನು ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ಅವರು ಇನ್ನೂ ನೂರು ವರ್ಷಕಾಲ ಬಾಳಿ ಅಂತ ಹೇಳುತ್ತಿದ್ದರು. ನಮಗೆ ನೂರು ವರ್ಷವಲ್ಲ, ಹದಿನೈದು ವರ್ಷಕ್ಕೆ ಸಾಕಾಗಿದೆ. ಹಾಗಾಗಿ ಈಗಲೇ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀವೇ ನಿಂತುಕೊಂಡು ಕಾರ್ಯಕ್ರಮಗಳನ್ನು ನೆಡೆಸಿಕೊಳ್ಳಿ, ನಾವು ನಿಮಿತ್ತ ಮಾತ್ರ ಇರುತ್ತೇವೆ. ಹೇಗೆ ಕಾರ್ಯಕ್ರಮ ಮಾಡಬೇಕು ಅಂತ ಹೇಳಿ ನಾವು ಮಾಡಿಕೊಂಡು ಹೋಗುತ್ತೇವೆ. ಬಹುಶಃ ನೀವು ಇದ್ದರೆ ಪರವಾಗಿಲ್ಲ. ಮುಂದೆ ಯಾರೇ ಬಂದರೂ ಕೂಡ ಸರ್ಕಾರ ಆಡಾಳಿತಾತ್ಮಕ ಏನಿದೆ ಅದನ್ನು ನಡೆಸಿಕೊಂಡು ಹೋಗಿ. ಈ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮ ರೀತಿ ಮಾಡಿಕೊಂಡು ಹೋಗಿ ಎಂದು ಹೇಳಿದರು.
ಪುಷ್ಪಗಿರಿ ಕ್ಷೇತ್ರ ಜಾತಿಗೆ ಸೀಮಿತ ಆಗಬಾರದು: ಈ ಪುಷ್ಪಗಿರಿ ಕ್ಷೇತ್ರ ಯಾವ ಜಾತಿಗೆ ಸೀಮಿತವಾಗಬಾರದು ಎಂಬ ಉದ್ದೇಶ ನಮಗಿದೆ. ಎಲ್ಲರಿಗೂ ಏಕಕಾಲದಲ್ಲಿ ಶಾಂತಿ, ಸಮಾಧಾನ ಬಿತ್ತುವಂತಹ, ಪ್ರಸಾದ ಕೊಡುವಂತಹ ಏಕೈಕ ಕ್ಷೇತ್ರ ಪುಷ್ಪಗಿರಿ ಆಗಬೇಕು ಎನ್ನುವುದು ನಮ್ಮ ಮನಸ್ಸಿನಲ್ಲಿದೆ . ಹಾಗಾಗಿ ನಾವು ಯಾವತ್ತು ಜಾತಿಗೆ ಸೀಮಿತವಾಗುವುದಿಲ್ಲ ಎಂದು ತಿಳಿಸಿದರು.
ಇದನ್ನು ನಿಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಿ. ಬಹಳ ಜನ ನಾಯಕರು ಕೆಳಗೆ ಹೆದರಿಕೊಂಡು ಕುಳಿತಿದ್ದಾರೆ ಎಂಬುದು ನನಗೆ ಗೊತ್ತಿದೆ. ಮೇಲೆ ಬಂದರೆ ನೀವು ಅಲ್ಲಿ ಹೋಗಿದ್ರೆ ಅನ್ನುವ ಭಯ ಅವರಿಗೆ ಕಾಣುತ್ತಿದೆ. ಒಂದೊಂದು ಸಾರಿ ನನ್ನ ಶಬ್ದಗಳು ಬಹಳ ಕಠಿಣ. ನಾನು ದಿಟ್ಟತನದಿಂದ ಇದ್ದೇನೆ ಎಂದು ಹೇಳಿದರು.
ಇದನ್ನೂಓದಿ:ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳಕ್ಕೆ ಜಾಗತಿಕ ಗೌರವವಿದೆ: ಗುರುರಾಜ ಕರ್ಜಗಿ