ಹಾಸನ:ಜಿಲ್ಲೆಯ ಜನ ಶಾಂತಿವಂತರು ಹಾಗೂ ಹೃದಯವಂತರು ಹಾಗೂ ಜಿಲ್ಲೆಯಲ್ಲಿ ಕೆಲಸ ಮಾಡಲು ಜನತೆಯ ಸಂಪೂರ್ಣ ಸಹಕಾರ ಮುಖ್ಯವೆಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸೆಪೆಟ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಡಾ. ರಾಮ್ ನಿವಾಸ್ ಸೆಪೆಟ್ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ತಮ್ಮ ಕಾರ್ಯವೈಖರಿ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಹಾಗೂ ಬಿಜಾಪುರ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಅಲ್ಲದೇ ಡಿಸಿಬಿ ಸೇರಿದಂತೆ 2008ನೇ ಬ್ಯಾಚ್‌ನಿಂದ ಸೇವೆ ಆರಂಭಿಸಿ ಇಲ್ಲಿವರೆಗೂ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ ಎಂದು ತಿಳಿಸಿದರು.
ಹಾಸನದ ಜನ ಎಂದರೇ ಶಾಂತಿಯುತ ಜನರು. ಜಿಲ್ಲೆಯಲ್ಲಿ ಒಳ್ಳೆ ಕೆಲಸ ಮಾಡಲು ಜನರ ಸಹಕಾರವು ಅವಶ್ಯಕವಾಗಿದೆ ಎಂದರು. ಶ್ರೀಮಂತನಿಂದ ಸಾಮಾನ್ಯ ಮನುಷ್ಯ ಸಮಸ್ಯೆ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದರೇ ಅವರಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಹಾಸನ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನಿರ್ದೇಶನ ಕೊಡಲಾಗಿದೆ ಎಂದರಲ್ಲದೇ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಶೋಷಿತರಿಗೆ ಪೊಲೀಸ್ ಇಲಾಖೆ ನೆರವು ದೊರಕಿಸಲು ಶ್ರಮಿಸುವುದಾಗಿ ಹೇಳಿದರು. ಯಾವುದೇ ಸಣ್ಣ-ಪುಟ್ಟ ಗೊಂದಲಗಳು ಕಂಡು ಬಂದರೇ ಅಲ್ಲಿ ಶಾಂತಿಯುತವಾಗಿ ಸುಧಾರಿಸುವ ಕೆಲಸ ಮಾಡಬೇಕು. ಕ್ರೈಂಗಳು ಹೆಚ್ಚು ನಡೆಯದಂತೆ ಪೊಲೀಸ್ ನಿಗಾ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ನಗರದಲ್ಲಿ ಮುಖ್ಯವಾಗಿ ಕಂಡು ಬರುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಹಂತ-ಹಂತವಾಗಿ ಗಮನ ನೀಡಿ ಸುಧಾರಣೆಗೆ ತರುವ ಕೆಲಸ ಮಾಡಲಾಗುವುದು ಹಾಗೂ ಆಟೋಗಳಿಗೆ ಮೀಟರ್ ಹಾಕದೇ ಸಾರ್ವಜನಿಕರಿಂದ ತಮಗೆ ಇಷ್ಟ ಬಂದಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆಟೋ ಸಂಘದವರನ್ನು ಕರೆಯಿಸಿ ಸಭೆ ಮಾಡಿ ಚರ್ಚೆ ಮಾಡುವ ಮೂಲಕ ಈ ಬಗ್ಗೆ ನಿಗಾವಹಿಸುವುದಾಗಿ ಇದೆ ವೇಳೆ ತಿಳಿಸಿದರು.