ಹಾಸನ/ಶಾಂತಿಗ್ರಾಮ:ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.
ಜಿಲ್ಲೆಯ ವಲ್ಲಭಾಯಿ ನಗರದ ನಿವಾಸಿ ಲೋಕಿ ಅಲಿಯಾಸ್ ಕೆಂಚ (43) ಕೊಲೆಯಾದ ರೌಡಿಶೀಟರ್ ಎನ್ನಲಾಗಿದೆ. ಇಂದು ಸಂಜೆ 4 ಗಂಟೆಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಶಾಂತಿಗ್ರಾಮ ಟೋಲ್ ಗೇಟ್ ಸಮೀಪವಿರುವ ಖಾಸಗಿ ಕೆಫೆಯೊಂದರ ಹಿಂಭಾಗಕ್ಕೆ ಈತನನ್ನ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು, ಈತನ ಮೇಲೆ ಹಾಸನದ ಪೆನ್ಷನ್ ಮೊಹಲ್ಲ, ಬಡಾವಣೆ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಅತ್ಯಾಚಾರ, ದರೋಡೆ, ಕೊಲೆ ಮುಂತಾದ ಹಲವು ಪ್ರಕರಣ ದಾಖಲಾಗಿವೆ. ಇತ್ತೀಚೆಗಷ್ಟೆ ಜೈಲಿನಿಂದ ಬೇಲ್ ಪಡೆದು ಹೊರಬಂದಿದ್ದ ಎನ್ನಲಾಗಿದೆ.
ಇನ್ನು ಹಾಸನ ತಾಲೂಕಿನ ಸೌದ್ರಳ್ಳಿ ಗೂಂಡಾ ಗ್ಯಾಂಗ್ನವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಈತ, ಹಣ ಮತ್ತು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಘಟನೆ ಸಂಬಂಧ ಹಾಸನ ನಗರ ಠಾಣೆಯಲ್ಲಿ ಮೃತನ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ.