ಹಾಸನ : ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ಥವ್ಯಸ್ತವಾಗಿದ್ದು, ಇಂದು ಕೂಡ ಸಕಲೇಶಪುರ, ಹಾಸನ, ಆಲೂರು, ಬೇಲೂರು, ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಲ್ಲಿ ಮಳೆ ಹೆಚ್ಚಾಗಿದೆ.
ಮಳೆಯ ಜೊತೆಗೆ ಬಿರುಗಾಳಿಯೂ ಹೆಚ್ಚಾಗಿರುವುದರಿಂದ ಬೆಳಗ್ಗೆ ಚನ್ನರಾಯಪಟ್ಟಣ ರಸ್ತೆ, ಹನಬಾಳ್-ಸಕಲೇಶಪುರ ರಸ್ತೆ ಮತ್ತು ಮಾರನಹಳ್ಳಿ-ಕಾಡುಮನೆ ರಸ್ತೆಗಳಲ್ಲಿ ಮರ ಉರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೂಡಲೇ ಅರಣ್ಯ ಇಲಾಖೆ, ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಸಂಚಾರ ವ್ಯವಸ್ಥೆಗೆ ಹೆಚ್ಚಿನ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಳೆರಾಯನ ತೀವ್ರತೆಗೆ ಎತ್ತಿನಹಳ್ಳ ಬಳಿ ಗುಡ್ಡ ಕುಸಿದು ರಾಷ್ಟೀಯ ಹೆದ್ದಾರಿ 75 ಸಂಪೂರ್ಣ ಬಂದಾಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗುಡ್ಡ ತೆರವು ಕಾರ್ಯದಲ್ಲಿ ತೊಡಗಿದ್ದಾರೆ.
ಸಕಲೇಶಪುರದಲ್ಲಿ ಜಲಾವೃತಗೊಂಡ ಪ್ರದೇಶಗಳ ಜನರಿಗಾಗಿ ಸುರಕ್ಷತೆಯ ದೃಷ್ಠಿಯಿಂದ ನಿರಾಶ್ರಿತರ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ರಾಮನಾಥಪುರದಲ್ಲಿ ಕಾವೇರಿ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟ ಹೆಚ್ಚಳದಿಂದ ಪ್ರವಾಹ ಪರಿಸ್ಥಿತಿ ತಲೆದೊರಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನರಿಗೆ ತಾತ್ಕಾಲಿಕ ಆಶ್ರಯ ತಾಣ ತೆರೆಯಲಾಗಿದೆ. ಸಂತ್ರಸ್ತರಿಗೆ ಊಟೋಪಚಾರ ವ್ಯವಸ್ಥೆಯನ್ನೂ ಮಾಡಲಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ವಾಟೆಹೊಳೆ, ಯಗಚಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೇಮಾವತಿ ಜಲಾಶಯದ ಒಳಹರಿವು 1,13,000 ಕ್ಯೂಸೆಕ್‌ಗೂ ಹೆಚ್ಚು ಏರಿಕೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೇಮಾವತಿ ಜಲಾಶಯದಿಂದ 75,000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ತಗ್ಗು ಪ್ರದೇಶದ ಜನರಿಗೆ ಮುಂಜಾಗ್ರತೆ ಸಂದೇಶವನ್ನು ರವಾನಿಸಿ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದ್ದಾರೆ.