ಹಾಸನ:ಉದ್ಯಾನವನ, ಕೆರೆ ಸೇರಿದಂತೆ 8.50 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಪ್ರೀತಂ ಜೆ. ಗೌಡ ಇಂದು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಲೆಯ ಹಿಂಭಾಗದ ವಿದ್ಯಾನಗರದಲ್ಲಿ ರಸ್ತೆ ಕಾಮಗಾರಿಗೆ ಮೊದಲು ಭೂಮಿ ಪೂಜೆ ನೆರವೇರಿಸದ ಶಾಸಕರು, ಸಾಲಗಾಮೆ ಭಾಗದ ಕಡದರ ಹಳ್ಳಿಯಿಂದ ಕಸಬಾದ ನಿಡೂಡಿವರೆಗಿನ ವಿವಿಧ ಗ್ರಾಮಗಳಿಗೆ ತೆರಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಕ್ಷೇತ್ರದಲ್ಲಿ 8.50 ಕೋಟಿ ಮೀಸಲಿರಿಸಿದ್ದು, ವಿವಿಧ ಕಾಮಗಾರಿಗಳಿಗೆ 12 ಗ್ರಾಮಗಳಲ್ಲಿ ಭೂಮಿ ಪೂಜೆ ಮಾಡಲಾಗಿದೆ. ಕಾವೇರಿ ನಿಗಮದ ವತಿಯಿಂದ 144 ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, ಕೆಲ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ನಗರದಲ್ಲಿ ಸಾರ್ವಜನಿಕರ ವಾಯು ವಿಹಾರಕ್ಕೆ 7 ಪಾರ್ಕ್ ಮತ್ತು ಏಳು ಕೆರೆಗಳನ್ನು ಪ್ರವಾಸಿಗರ ಆಕರ್ಷಣೆಯ ಸ್ಥಳಗಳಾಗಿ ಅಭಿವೃದ್ಧಿಪಡಿಸಲಾಗುವುದು. ಡಿಸೆಂಬರ್ ಒಳಗೆ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗುತ್ತವೆ. ಹುಣಸಿನ ಕೆರೆ, ಸತ್ಯಮಂಗಲ ಕೆರೆ, ತೇಜೂರು ಕೆರೆ ಹಾಗೂ 7 ಉದ್ಯಾನವನವನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಪ್ರತಿ ಗ್ರಾಮಗಳಿಗೂ 50 ಲಕ್ಷದಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಹಲವಾರು ಕಾಮಗಾರಿಗಳನ್ನು ಪ್ರಾರಂಭ ಮಾಡುವುದಾಗಿ ಹೇಳಿದರು.