ಹಾಸನ :ಆಹಾರ ಹುಡುಕಿ ಬಂದ ಜಿಂಕೆಯೊಂದು ಕಾಫಿ ತೋಟಕ್ಕೆ ನುಗ್ಗುವ ಧಾವಂತದಲ್ಲಿ ಗೇಟಿನ ಸಲಾಕೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಕಾಫಿ ತೋಟಕ್ಕೆ ನುಗ್ಗುವ ಧಾವಂತದಲ್ಲಿ ಗೇಟಿಗೆ ಸಿಲುಕಿ ನರಳಾಡಿದ ಜಿಂಕೆ - Deer stuck in to the gate
ಕಾಫಿ ತೋಟಕ್ಕೆ ನುಗ್ಗಿದ ಜಿಂಕೆಯೊಂದು ಜನರನ್ನು ನೋಡಿ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಬ್ಬಿಣದ ಗೇಟಿಗೆ ಸಿಲುಕಿಕೊಂಡ ನರಳಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಾನುಬಾಳು ಹೋಬಳಿಯ ಹುರುಡಿ ಸಮೀಪದ ಎಸ್ಟೇಟ್ಗೆ ನುಗ್ಗಿದ ಜಿಂಕೆ, ಜನರನ್ನು ಕಂಡು ಓಡುವ ಧಾವಂತದಲ್ಲಿ ಏಕಾಏಕಿ ಕಬ್ಬಿಣದ ಗೇಟ್ ಮೇಲಿಂದ ಹಾರಿದೆ. ಈ ವೇಳೆ ಗೇಟ್ನ ಸಲಾಕೆಗೆ ಚರ್ಮ ಸಿಲುಕಿ ಸುಮಾರು ಕೆಲಕಾಲ ನರಳಾಡಿದೆ. ಇದನ್ನು ಕಂಡ ಕಾಫಿ ತೋಟದ ಕಾರ್ಮಿಕರು ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಗೇಟಿಗೆ ಸಿಲುಕಿಕೊಂಡ ಜಿಂಕೆಯನ್ನು ಬಿಡಿಸಲು ಸಾಕಷ್ಟು ಪ್ರಯತ್ನಪಟ್ಟರು ಸಾಧ್ಯವಾಗದಿದ್ದಾಗ, ಚಾಕು ತಂದು ಜಿಂಕೆಯ ಹೊಟ್ಟೆಯ ಭಾಗದ ಸ್ವಲ್ಪ ಚರ್ಮವನ್ನು ಕಟ್ ಮಾಡಲಾಯಿತು. ಕೆಳಗೆ ಬಿದ್ದ ಜಿಂಕೆ, ತಕ್ಷಣ ಸ್ಥಳದಿಂದ ಓಡಿ ಹೋಗಿದೆ.
ಇನ್ನು ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಆದರೆ ಇದು ಈ ಭಾಗದಲ್ಲಿ ನಡೆದಿರುವ ಎರಡನೆ ಘಟನೆ ಎಂಬುದು ಸ್ಥಳೀಯರ ಆರೋಪ. ಇನ್ನು ಜಿಂಕೆಗಳು ನಾಡಿನತ್ತ ಆಗಮಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಜಿಂಕೆಗಳು ಸಾವನ್ನಪ್ಪಿದ್ದವು. ವನ್ಯ ಪ್ರಾಣಿಗಳಿಗೆ ಬೇಕಾಗುವ ಗಿಡಗಳನ್ನು ಅರಣ್ಯ ಅಧಿಕಾರಿಗಳು ಬೆಳೆಸುತ್ತಿಲ್ಲ. ಹಾಗಾಗಿ ಜಿಂಕೆಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಇಂತಹ ಘಟನೆಗಳು ನಡೆಯುತ್ತವೆ. ಆದ್ದರಿಂದ ಅರಣ್ಯಾಧಿಕಾರಿಗಳು ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.