ಹಾಸನ: ಸಕಲೇಶಪುರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದು, ಕೈ ಕಾರ್ಯಕರ್ತರು ಮೈತ್ರಿ ಧರ್ಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ತಣ್ಣಗಾಗದ ಕೈ ಕಾರ್ಯಕರ್ತರ ಅಸಮಾಧಾನ... ಮನವೊಲಿಕೆ ಸಭೆ ವಿಫಲ
ಹಾಸನದಲ್ಲಿ ಮೈತ್ರಿ ಧರ್ಮದ ವಿರುದ್ಧ ಕೈ ಕಾರ್ಯಕರ್ತರ ಅಸಮಾಧಾನದ ಹೊಗೆ ಇನ್ನೂ ಕಡಿಮೆಯಾಗಿಲ್ಲ. ಸಕಲೇಶಪುರದಲ್ಲಿ ಕರೆದಿದ್ದ ಮನವೊಲಿಕೆ ಸಭೆ ವಿಫಲ. ಜೆಡಿಎಸ್ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಕಾರ್ಯಕರ್ತರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಯಾವ ನೈತಿಕತೆಯಿಂದ ಬೆಂಬಲ ನೀಡಿ ಗೆಲ್ಲಿಸಬೇಕು ಎಂದು ಸಕಲೇಶಪುರದ ಒಕ್ಕಲಿಗರ ಸಮುದಾಯ ಭವನದಲ್ಲಿನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡ ಬಿ.ಶಿವರಾಂ, ಹೆಚ್.ಕೆ.ಜವರೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಿ ಮೈತ್ರಿ ಧರ್ಮ ಪಾಲಿಸುವ ಸಂಬಂಧ ಮಾತನಾಡುವ ಪ್ರಯತ್ನ ನಡೆಯಿತು. ಸಭೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ಜೆಡಿಎಸ್ ಧೋರಣೆ ವಿರುದ್ಧತೀವ್ರ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು, ವೇದಿಕೆಯಲ್ಲಿದ್ದ ಗಣ್ಯರನ್ನೇ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಕಾರ್ಯಕರ್ತರನ್ನು ಸೌಜನ್ಯಕ್ಕೂ ಮಾತನಾಡಿಸದ ಪ್ರಜ್ವಲ್ ಹಾಗೂ ವರಿಷ್ಠರಿಗೆ ನಾವೇಕೆ ಬೆಂಬಲ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಜೆಡಿಎಸ್ ವರ್ತನೆಯಿಂದ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಅಧಿಕಾರಕ್ಕಾಗಿ ಚುನಾವಣೆವರೆಗೂ ಸುಮ್ಮನಿರುವ ಜೆಡಿಎಸ್ ಪಾಳಯದವರುನಂತರ ನಮ್ಮನ್ನು ಕಾಲ್ಚೆಂಡಿನಂತೆ ಒದೆಯುವುದರಲ್ಲಿ ಅಚ್ಚರಿ ಇಲ್ಲ. ಮೇಲಿನವರು ಮೈತ್ರಿ ಮಾಡಿಕೊಂಡರೆ ನಾವು ಕೋಲೆ ಬಸವರಂತೆ ತಲೆ ಆಡಿಸಲು ಹೇಗೆ ಸಾಧ್ಯ ಎಂದರು.
ಈ ನಡುವೆ ಕೆಲವರು ಆಕ್ರೋಶದಲ್ಲಿಮಾತನಾಡಿದ್ದರ ಪರಿಣಾಮ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭೆ ಮುಗಿಯುವ ವರೆಗೂ ಭಿನ್ನಮತದ ಹೊಗೆಯಾಡುತ್ತಲೇ ಇತ್ತು.ಸಭೆ ಆರಂಭವಾಗಿ ಮುಗಿಯುವವರೆಗೂ ಅಸಮಾಧಾನ, ಆಕ್ರೋಶ, ಜಟಾಪಟಿ, ಓಲೈಕೆ ಮುಂದುವರೆದಿತ್ತು. ಮುಖಂಡ ಹೆಚ್.ಕೆ.ಜವರೇಗೌಡ, ಭೈರುಮುಡಿ ಚಂದ್ರು, ವೈ.ಪಿ.ರಾಜೇಗೌಡ ಮೊದಲಾದವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.