ಕರ್ನಾಟಕ

karnataka

ETV Bharat / state

ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ - ಕುಡುಕ ಗಂಡನ ಕಿರುಕುಳ

ಕುಡುಕ ಗಂಡನ ಕಿರುಕುಳ ತಾಳಲಾರದೇ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಗೃಹಣಿ ದ್ರಾಕ್ಷಾಯಿಣಿ (33)

By

Published : Aug 20, 2019, 4:02 AM IST

ಹಾಸನ:ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಮನಾಥಪುರದಲ್ಲಿ ನಡೆದಿದೆ.ದ್ರಾಕ್ಷಾಯಿಣಿ (33) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ರಾಮನಾಥಪುರದ ಮಡಕೆ ಹೊಸಹಳ್ಳಿಯ ದ್ರಾಕ್ಷಾಯಣಿಯನ್ನು ಮಂಡ್ಯದ ಕಲ್ಲಹಳ್ಳಿ ನಿವಾಸಿ ಪ್ರದೀಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಮೂರ್ನಾಲ್ಕು ವರ್ಷ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದ ಇಬ್ಬರು ನಂತರದ ದಿನಗಳಲ್ಲಿ ಸಣ್ಣ-ಪುಟ್ಟ ಜಗಳ ಮಾಡಿಕೊಂಡು ರಂಪ-ರಾದ್ಧಾಂತ ಮಾಡಿಕೊಳ್ಳುತ್ತಿದ್ದರು.

ದುಡಿದ ಹಣವನ್ನೆಲ್ಲಾ ಕುಡಿದು ಹಾಳು ಮಾಡುತ್ತಿದ್ದ ಪ್ರದೀಪ ಹಲವರ ಬಳಿ ಕೈಸಾಲ ಸಹ ಮಾಡಿಕೊಂಡಿದ್ದ. ಹೀಗಾಗಿ ಮಂಡ್ಯದಿಂದ ವಾಪಸ್ ರಾಮನಾಥಪುರಕ್ಕೆ ಬಂದು ದ್ವಿಚಕ್ರ ವಾಹನಗಳ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ, ಕುಡಿತದ ಚಟ ಬಿಡದ ಪ್ರದೀಪ ಮತ್ತೆ ಹೆಂಡತಿಗೆ ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಅಲ್ಲದೆ ಇದೇ ವಿಚಾರವಾಗಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಎಂಟ್ಹತ್ತು ಬಾರಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಬುದ್ಧಿವಾದ ಹೇಳಿದ್ದರು. ಆದರೆ, ಇವತ್ತು ಮತ್ತೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಜಗಳದ ಮಧ್ಯೆ ಮನನೊಂದು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಆದರೆ, ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಮಕ್ಕಳಿಗಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದು, ಗಂಡನೇ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ನಂಬಿಸಲು ಹೊರಟಿದ್ದಾನೆ ಎಂದು ಮೃತ ದ್ರಾಕ್ಷಾಯಿಣಿ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.

ಸದ್ಯ ಮೃತ ದೇಹವನ್ನು ರಾಮನಾಥಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details