ಹಾಸನ:ಹಾಸನ ಜಿಲ್ಲೆ ಎಂದರೆ ಗಂಡು ಮೆಟ್ಟಿದ ಜಾಗ. ಜಿಲ್ಲೆಯ ಜನರನ್ನು ದ್ವೇಷ ಮಾಡಬೇಡಿ, ಈ ಜಿಲ್ಲೆ ಎದ್ದರೆ ರಾಜ್ಯದಲ್ಲಿ ಯಾವ ಸರ್ಕಾರ ಉಳಿಯುವುದಿಲ್ಲ ಅದನ್ನು ಬರೆದಿಟ್ಟುಕೊಳ್ಳಿ. ಹಿಂದೆ ದೊಡ್ಡಹಳ್ಳಿ ಗ್ರಾಮದಲ್ಲಿ ಗೋಲಿಬಾರ್ ಆದ ದಿನದಿಂದ ಈ ಜಿಲ್ಲೆಯ ಶಾಪ ತಟ್ಟುತ್ತಿದೆ. ಇಲ್ಲಿಯವರೆಗೂ ಎಲ್ಲಾ ಸರ್ಕಾರಗಳು ಬಿದ್ದೋಗಿವೆ. ಈ ಸರ್ಕಾರವೂ ಬೀಳುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಇರುವುದು ಲೂಟಿಕೋರರ ಬಿಜೆಪಿ ಸರ್ಕಾರ ಎಂದ ರೇವಣ್ಣ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಲೂಟಿಕೋರರ ಬಿಜೆಪಿ ಸರ್ಕಾರವಾಗಿದ್ದು, ಮೊಸಳೆ ಹೊಸಳ್ಳಿಯಲ್ಲಿರುವ ಸರ್ಕಾರಿ ಇಂಜಿನಿಯರ್ ಕಾಲೇಜನ್ನು ಸ್ಥಳಾಂತರ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಪ್ರಪಂಚಕ್ಕೆ ಆವರಿಸಿರುವ ಕೊರೊನಾ ಹೆಸರಿನಲ್ಲಿ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಸಾರ್ವಜನಿಕ ಹೌಸಿಂಗ್ ಕಮಿಟಿ ಚೇರ್ಮನ್ ಭೇಟಿ ಮಾಡಲು ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು, ಈ ಹಿಂದೆ 14 ತಿಂಗಳ ನಮ್ಮ ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಯಡಿಯೂರಪ್ಪರ ಅಳಿಯ ಇಂಜಿನಿಯರ್‌ರನ್ನ ಹುಬ್ಬಳಿಯಲ್ಲೇ ಮುಂದುವರೆಸಿ ಆತನಿಗೆ ಬಡ್ತಿಯನ್ನೂ ಕೊಡಿಸಿದ್ದೆ. ಆಗ ಕಾಂಗ್ರೆಸ್‌ನವರು ವಿರೋಧಿಸಿದ್ದರು. ಆದರೂ ನಾನು ಆತನನ್ನು ಮುಂದುವರೆಸಿದ್ದೆ. ಅದೆಲ್ಲವನ್ನೂ ಮರೆತ ಬಿಎಸ್‌ವೈ ಇದೀಗ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಾಸನ ತಾಲೂಕಿನ ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಹಾಸನ ಇಂಜಿನಿಯರಿಂಗ್ ಕಾಲೇಜಿಗೆ ಸ್ಥಳಾಂತರಿಸಿ, ಮೊಸಳೆಹೊಸಳ್ಳಿ ಕಾಲೇಜನ್ನು ಮುಚ್ಚಲಾಗುತ್ತಿದೆ. ಇಂತಹ ದ್ವೇಷದ ರಾಜಕಾರಣವನ್ನು ಯಡಿಯೂರಪ್ಪ ಬಿಡಬೇಕು ಎಂದು ಕಿರಿಕಾರಿದರು. ಕಾಲೇಜು ಮುಚ್ಚುವುದಿಲ್ಲ ಎಂದು ವಿಧಾನಸಭೆಯಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಕಮಿಟಿಗೆ ದೂರು ಸಲ್ಲಿಸುವುದಾಗಿ ರೇವಣ್ಣ ತಿಳಿಸಿದರು.