ಹಾಸನ: ಕೊರೊನಾ ಕಾರಣದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲಾಗಿದೆ. ಕೊರೊನಾ ಸಮಸ್ಯೆ ಇರುವುದು ಮೂರು ತಿಂಗಳಿಂದ ಚುನಾವಣಾ ಆಯೋಗವು 6 ತಿಂಗಳು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮೀಸಲಾತಿ ನಿಗಧಿ ಮಾಡಬೇಕಿತ್ತು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗವು ಸರ್ಕಾರದ ಕೈಗೊಂಬೆಯಾಗಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಚುನಾವಣೆ ಆಯೋಗಕ್ಕೆ ತನ್ನದೆ ಆದ ಗೌರವ ಇರುತ್ತದೆ. ಆ ಗೌರವವನ್ನು ಅದು ಉಳಿಸಿಕೊಂಡು ಹೋಗಲಿ ಎಂದು ಹೇಳಿದರು.
ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಇನ್ನೂ ಆಡಳಿತ ನಡೆಸಲು ಅವಕಾಶ ಕೊಟ್ಟಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ವಿಚಾರ ನ್ಯಾಯಾಲಯದಲ್ಲಿದ್ದು, ಸರ್ಕಾರ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸಿ ತಡೆಯಾಜ್ಞೆ ತೆರವು ಮಾಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಅಡ್ವಕೇಟ್ ಜನರಲ್ ಅವರು ಯಾವುದೇ ಪಕ್ಷದ ಹಂಗಲ್ಲಿ ಇರಬಾದರು. ಪಬ್ಲಿಕ್ ಪ್ರಸೀಕ್ಯೂಟರ್‌ಗಳು ತಮ್ಮ ಕರ್ತವ್ಯ ಲೋಪ ಆಗದಂತೆ ಕಾರ್ಯ ನಿರ್ವಹಿಸಲಿ. ಒಂದು ವೇಳೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಒದಗಿಸಲು ಆಗದಿದ್ದರೆ ಚುನಾವಣೆ ರದ್ಧು ಮಾಡಲಿ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸದೇ ಇರುವುದು ಇದು ಒಂದು ಇತಿಹಾಸ ಎಂದರು.