ಹಾಸನ : ನಿನ್ನೆ ನಡೆದ ಜಲಧಾರೆ ಸಮಾವೇಶಕ್ಕೆ ಜಿಲ್ಲೆಯ ಇಬ್ಬರು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಎ.ಟಿ.ರಾಮಸ್ವಾಮಿ ಗೈರಾಗಿದ್ದರು. ಆದರೆ, ಶಿವಲಿಂಗೇಗೌಡರ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಆರಂಭದಲ್ಲಿ ಮಾತನಾಡಿದ ಹೆಚ್‌ಡಿಕೆ, ಬೆನ್ನಿಗೆ ಚೂರಿ ಹಾಕೋ ರಾಜಕಾರಣ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಪಕ್ಷದಲ್ಲಿದ್ದುಕೊಂಡೇ ಕತ್ತು ಕೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ದ್ರೋಹವನ್ನು ದಯಮಾಡಿ ಮುಂದೆ ಮಾಡಬೇಡಿ.
ನಾನು ಮುಖ್ಯಮಂತ್ರಿಯಾಗಿದ್ದಾಗ ರೇವಣ್ಣ, ಬಾಲಕೃಷ್ಣ ಹಾಗೂ ಶಿವಲಿಂಗೇಗೌಡ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಕಾಲೇಜ್ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಹೊಳೆನರಸೀಪುರಕ್ಕೆ ಹಾಗೂ ಅರಸೀಕೆರೆ ಹಿಂದುಳಿದ ಕ್ಷೇತ್ರ ಎಂದು ಕಾಲೇಜು ಮಂಜೂರು ಮಾಡಿಕೊಟ್ಟೆ ಎಂದರು.
ಇನ್ನು ತೆಂಗಿನ ನುಸಿಪೀಡೆ ರೋಗಕ್ಕೆ ಪರಿಹಾರ ನೀಡಬೇಕು ಎಂದು ಇದೇ ಶಿವಲಿಂಗೇಗೌಡ ಧರಣಿ ಕೂತರು. ಆಗ ಯಾವ ಪ್ರಧಾನಿಯೂ ಹಣ ಬಿಡುಗಡೆ ಮಾಡಲಿಲ್ಲ. 57 ಕೋಟಿ ರೂಪಾಯಿಗಳನ್ನು ಹಾಸನ ಜಿಲ್ಲೆಯ ರೈತರಿಗೆ ಕೊಟ್ಟಿದ್ದು ನನ್ನ ಸರ್ಕಾರ, ಅದನ್ನ ಅರ್ಥಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಈಗ ನನ್ನ ಗೆಲುವಿಗೆ ಕಾರಣ ಸಿದ್ದರಾಮಯ್ಯ, ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಯನ್ನು ನಮಗೆ ಕೊಟ್ಟರು ಎಂದು ಹೊಗಳುತ್ತಿದ್ದಾರೆ ಎಂದು ಮಾತಿನಲ್ಲಿಯೇ ತಿವಿದರು.