ಏ.13 ರಿಂದ ಪ್ರಜ್ವಲ್ ಬ್ರಿಗೇಡ್ನಿಂದ ದಿನಸಿ ವಸ್ತುಗಳ ವಿತರಣೆ.. ಸದುಪಯೋಗಕ್ಕೆ ಮನವಿ - ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
ಪ್ರಜ್ವಲ್ ಬ್ರಿಗೇಡ್ ಸಂಘಟನೆಯಿಂದ ಏಪ್ರಿಲ್ 13 ರಿಂದ ಸುಮಾರು 8 ವಾಹನಗಳ ಮೂಲಕ ಪ್ರತಿ ತಾಲೂಕಿಗೂ ದಿನಸಿ ಪದಾರ್ಥಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದೇವೆ. ಇದಕ್ಕೆ ಹೊಳೆನರಸಿಪುರ ಶಾಸಕ ಎಚ್. ಡಿ. ರೇವಣ್ಣ ಚಾಲನೆ ನೀಡಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಹಾಸನ: ಏಪ್ರಿಲ್ 13 ರಿಂದ ಪ್ರಜ್ವಲ್ ಬ್ರಿಗೇಡ್ ಮೂಲಕ ಜಿಲ್ಲೆಯ ಅಸಂಘಟಿತ ವಲಯಕ್ಕೆ ಮತ್ತು ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಕ್ಕೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ದೇಶದಲ್ಲಿ ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದ ಜನಜೀವನ ಅಸ್ಥವ್ಯಸ್ತ ಗೊಂಡಿದೆ. ಗ್ರಾಮೀಣ ಭಾಗದ ಮತ್ತು ಅಸಂಘಟಿತ ಕಾರ್ಮಿಕರು ಕೂಡ ಇದರಿಂದ ಅನುಭವಿಸುತ್ತಿರುವ ಕಷ್ಟ ಹೇಳ ತೀರದಾಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ನಮ್ಮ ಪ್ರಜ್ವಲ್ ಬ್ರಿಗೇಡ್ ಸಂಘಟನೆಯಿಂದ ಕೂಡ ಸೋಮವಾರ ಸುಮಾರು 8 ವಾಹನಗಳ ಮೂಲಕ ಪ್ರತಿ ತಾಲೂಕಿಗೂ ದಿನಸಿ ಪದಾರ್ಥಗಳನ್ನು ವಿತರಿಸುವ ಕಾರ್ಯ ಮಾಡುತ್ತೇವೆ. ಇದಕ್ಕೆ ಹೊಳೆನರಸಿಪುರ ಶಾಸಕ ಎಚ್. ಡಿ. ರೇವಣ್ಣ ಚಾಲನೆ ನೀಡಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಇನ್ನು ಇದೇ ವೇಳೆ ಮಾತನಾಡಿದ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಈಗಾಗಲೇ ಹಾಸನ ಹಾಲು ಒಕ್ಕೂಟದಿಂದ ಪ್ರತಿ ಕುಟುಂಬಕ್ಕೆ 1 ಲೀಟರ್ ಹಾಲಿನ ಪ್ಯಾಕೆಟ್ ಗಳನ್ನು ನೀಡಲಾಗುತ್ತಿದ್ದು, ಶಾಸಕರು ವಿವಿಧ ಬಡಾವಣೆಗಳಿಗೆ ತೆರಳಿ ವಿತರಣೆ ಮಾಡುತ್ತಿದ್ದಾರೆ ಎಂದರು.