ಹಾಸನ:ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ದಾಖಲಾತಿಗಳನ್ನು ಪರಿಶೀಲಿಸಿ ಇದುವರೆಗೂ ಹಣ ಮಂಜೂರು ಮಾಡದೆ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಶಿವಬಸಪ್ಪ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಸದಸ್ಯ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಕೆಂಕೆರೆ ಗ್ರಾಮ ಪಂಚಾಯಿತಿ ಪಾಳ್ಯದ ನಿವಾಸಿ ನೂರ್ಜಹಾನ್ ಎಂಬವರಿಗೆ 2016-17ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಮನೆ ಮಂಜೂರು ಮಾಡಲಾಗಿತ್ತು. ಮಂಜೂರಾತಿ ಆದೇಶದ ಪ್ರಕಾರ, ಮನೆಗೆ ಫೌಂಡೇಶನ್ ಮಾಡಿಸಲಾಗಿದ್ದು, ಮೊದಲನೇ ಕಂತಿನ ಹಣ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ನಂತರ ಕಟ್ಟಡ ಕೆಲಸ ಪ್ರಾರಂಭಿಸಲಾಗಿತ್ತು. ಅಷ್ಟರೊಳಗೆ ಅವರ ಪಕ್ಕದ ಮನೆಯವರಾದ ಜಮಷೀರ್ ಇವರ ವಿರುದ್ಧ ದೂರು ಅರ್ಜಿ ಕೊಟ್ಟು, ಬಿಲ್ ಪಾವತಿ ಮಾಡದ ಹಾಗೆ ಪಿಡಿಓಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಈ ವಿಷಯ ತಿಳಿದ ನೂರ್ಜಹಾನ್ ಬಿಲ್ ಮಂಜೂರಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅರಸೀಕೆರೆಯ ಇಓ, ಹಾಗೂ ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಈ ಕುರಿತು ಅರ್ಜಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಆದ್ರೂ ಪಿಡಿಓ ಹಾಗೂ ಇಓ ಇಲ್ಲಿವರೆಗೂ ಹಣ ಬಿಡುಗಡೆ ಮಾಡಲು ಯಾವ ಕ್ರಮ ಕೈಗೊಂಡಿರುವುದಿಲ್ಲ. ಇಲ್ಲಿ ರಾಜಕೀಯ ದುರುದ್ದೇಶದಲ್ಲಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.
ನೂರ್ಜಾನ್ ಅವರು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಬಿಲ್ ತಡೆ ಹಿಡಿದಿದ್ದಾರೆ. ಮನೆ ಗೋಡೆಯು ಮಳೆ ಗಾಳಿಗೆ ಕುಸಿದು ಬಿದ್ದಿದ್ದು, ಇದನ್ನು ಸರಿ ಮಾಡಲು ಬೇರೆಯವರ ಬಳಿ ಬಡ್ಡಿಗೆ ಹಣ ಪಡೆದು ನೂರ್ಜಹಾನ್ ಮನೆ ನಿರ್ಮಿಸುತ್ತಿದ್ದಾರೆ. ಮನೆ ನಿರ್ಮಾಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೂ ಅಧಿಕಾರಿಗಳು ಹಣ ಮಂಜೂರು ಮಾಡಲು ಹಿಂದುಮುಂದು ನೋಡುತ್ತಿದ್ದಾರೆ. ಈ ಅಧಿಕಾರಿಗಳ ಬಗ್ಗೆ ಶಿಸ್ತುಕ್ರಮ ಜರುಗಿಸಿ ನೂರ್ಜಾನ್ರವರ ನ್ಯಾಯಯುತ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಆತ್ಮಹತ್ಯೆಗೆ ಶರಣರಾಗುವುದಾಗಿ ಈಗಾಗಲೇ ನೂರ್ಜಾನ್ ತಿಳಿಸಿರುವುದಾಗಿ ಹೇಳಿದರು.