ಹಾಸನ:ಗ್ರಾಮ ಪಂಚಾಯ್ತಿ ಸದಸ್ಯೆ ನೀರಿನ ವಿಚಾರಕ್ಕೆ ಅಲ್ಲಿನ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದು, ಆಕೆಯ ಮತ್ತು ಸ್ಥಳೀಯರ ನಡುವಿನ ಕಿತ್ತಾಟ ಈಗ ತಾಲೂಕು ಪಂಚಾಯಿತಿ ಮೆಟ್ಟಿಲೇರಿದೆ.
ಮಹಿಳೆಯ ಹೆಸರು ಜಯಮಾಲ ಜಯಣ್ಣ. ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿಯ ಗ್ರಾ. ಪಂ. ಸದಸ್ಯೆ. ಬರಗಾಲದಿಂದ ತತ್ತರಿಸಿರೋ ಇಂತಹ ಸಂದರ್ಭದಲ್ಲಿ ಇವರು ಕಳೆದ 20 ವರ್ಷಗಳಿಂದ ಉಪಯೋಗಿಸುತ್ತಿದ್ದ ತೆರೆದ ಬಾಯಿಯ ನೀರಿಗೆ ಕ್ಯಾತೆ ತೆಗೆದಿದ್ದಾರೆ. ಬ್ಯಾಕರವಳ್ಳಿ ಸಮೀಪದ ಅರಕೆರೆ ಎಂಬ ಗ್ರಾಮದ ಸಮೀಪ ಇರುವ ಬ್ಯಾಗ್ ದೀಣೆಯ ಹಲವು ಕುಟುಂಬಗಳು ಇವರ ಕಿರುಕುಳದಿಂದ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ ಎನ್ನಲಾಗಿದೆ.
ತೆರೆದ ಬಾವಿಯಿಂದ ಜನರಿಗೆ ನೀರು ಕೊಡದೆ ಕ್ಯಾತೆ ಏನಿದು ಪ್ರಕರಣ:
2001ರಲ್ಲಿ ಬ್ಯಾಕರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಅರಕೆರೆಯಲ್ಲಿ ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುವಂತೆ ಅಂದಿನ ಗ್ರಾ.ಪಂ.ಅಧ್ಯಕ್ಷರಾಗಿದ್ದ ಅಣ್ಣೇಗೌಡ ಎಂಬುವವರು ತೆರೆದ ಬಾಯಿಯೊಂದನ್ನ ಸರ್ಕಾರದ ಅನುದಾನದಲ್ಲಿ ಕಟ್ಟಿಸಿದ್ದರು. ಈ ಬಾವಿಗೆ ನೀರೆತ್ತುವ ಮೋಟಾರ್ ಒಂದನ್ನ ಅಳವಡಿಸಿ ಸುಮಾರು 19 ವರ್ಷಗಳಿಂದಲೂ ಸುತ್ತ ಮುತ್ತಲ ಭಾಗಗಳಿಗೆ ನೀರು ಹರಿಸುತ್ತಿದ್ದರು.
ಪ್ರತಿ ತಿಂಗಳು ವಿದ್ಯುತ್ ಬಿಲ್ ಕೂಡಾ ಗ್ರಾ.ಪಂ.ವತಿಯಿಂದಲೇ ಕಟ್ಟುತ್ತಿದ್ದರು. ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಈ ಭಾಗದಲ್ಲಿ ನೀರು ಕಡಿಮೆಯಾಗುವುದರಿಂದ ಈ ತೆರೆದ ಬಾವಿಯ ನೀರನ್ನೇ ಮೋಟಾರ್ ಮೂಲಕ ಎತ್ತಿ ಟ್ಯಾಂಕ್ ಗಳಿಗೆ ತುಂಬಿಸಲಾಗುತ್ತಿತ್ತು. ಆದರೆ, ಈ ಬಾರಿ ಮಾತ್ರ ಗ್ರಾ.ಪಂ.ಸದಸ್ಯೆಯಾಗಿರೋ ಜಯಮಾಲಾ ಜಯಣ್ಣ ಗ್ರಾಮದ ಕೆಲವು ಮಂದಿಯೊಂದಿಗೆ ವೈಯಕ್ತಿಕ ದ್ವೇಷ ಕಟ್ಟಿಕೊಂಡಿರೋ ಹಿನ್ನೆಲೆಯಲ್ಲಿ ನೀರು ಬಿಡಲು ಕ್ಯಾತೆ ತೆಗೆದಿದ್ದಾರೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ.
ಅರೆಕೆರೆ ಕಲ್ಲಾರೆ ಗ್ರಾಮದಲ್ಲಿ ಗ್ರಾ.ಪಂ.ನಿಂದ ಈಗಾಗಲೇ 5 ಕೊಳವೆ ಬಾವಿಗಳನ್ನ ಕೊರೆಸಿದ್ದು, ಅವುಗಳು ವಿಫಲವಾಗಿರುವ ಹಿನ್ನೆ ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಮೋಟಾರ್ ದುರಸ್ತಿಗಾಗಿ ಗ್ರಾ.ಪಂ ವತಿಯಿಂದಲೇ 60 ಸಾವಿರ ಬಿಡುಗಡೆ ಮಾಡಿಸಿಕೊಂಡಿದ್ದಾರಂತೆ.
ತೆರೆದ ಬಾವಿಯಿಂದ ಮೋಟಾರ್ ಮೂಲಕ ನೀರು ಪಡೆಯಲು ಮುಂದಾದ ವೇಳೆ ಗ್ರಾಮಸ್ಥರುಗಳೊಂದಿಗೆ ಗ್ರಾ. ಪಂ.ಸದಸ್ಯೆ ದರ್ಪ ತೋರಿದ್ದಾರೆ. ಸಮಸ್ಯೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಇಒ ಹರೀಶ್, ಗ್ರಾ.ಪಂ ಪಿಡಿಒ ದರ್ಶನ್, ಬ್ಯಾಕರವಳ್ಳಿ ಗ್ರಾ.ಪಂ.ಅಧ್ಯಕ್ಷ ವಿಜಯ್ ಇನ್ನಿತರರು ಸ್ಥಳ ಪರಿಶೀಲನೆ ನಡೆಸಿದ್ದು, ಗ್ರಾ.ಪಂ.ಸದಸ್ಯೆಯಾಗಿರೋ ಜಯಮಾಲಾಳನ್ನ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಅದು ವಿಫಲವಾಗಿದೆ.
ಒಟ್ಟಾರೆ ಕುಡಿಯುವ ನೀರಿಗೂ ಕ್ಯಾತೆ ತೆಗೆದು ರಂಪಾಟ ಮಾಡ್ತಿರೋ ಗ್ರಾಮ ಪಂಚಾಯಿತಿ ಸದಸ್ಯೆಯ ವರ್ತನೆಗೆ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.