ಹಾಸನ:ನಿತ್ಯವೂ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಜಪ ಮಾಡದಿದ್ದರೆ ಶಾಸಕ ಪ್ರೀತಂ ಜೆ. ಗೌಡರಿಗೆ ಸಮಾಧಾನವಿಲ್ಲ ಎಂದು ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಬಗ್ಗೆ ಶಾಸಕ ಪ್ರೀತಮ್ ಜೆ. ಗೌಡರು ಹಗುರವಾಗಿ ಮಾತನಾಡಿದ್ದಾರೆ. ಪ್ರೀತಮ್ ಗೌಡರಿಗೆ ಬೆಳಗ್ಗೆ ಎದ್ದೊಡನೆ ರೇವಣ್ಣನವರ ಹೆಸರು ಹೇಳಿಕೊಂಡು ಜಪ ಮಾಡದಿದ್ದರೆ ಸಮಾಧಾನವಾಗುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಪ್ರತಿ ದಿನ ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದರೆ ಹೈಕಮಾಂಡ್ನಲ್ಲಿ ಮತ್ತು ಜನರ ಮುಂದೆ ದೊಡ್ಡ ವ್ಯಕ್ತಿ ಆಗಬಹುದು ಅಂದುಕೊಂಡಿದ್ದರೆ ಅದು ತಪ್ಪು ಭಾವನೆ. ಇಡೀ ಕರ್ನಾಟಕದಲ್ಲಿ ಭ್ರಷ್ಟ ಶಾಸಕರು ಎಂದರೆ ಅದು ಹಾಸನದ ಶಾಸಕರು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡುತ್ತಿದ್ದಾರೆ ಎಂದರು.
ಚುನಾವಣೆಗೆ ಮೊದಲು ಶಾಸಕರು ಆಟೋ ಟಿಪ್ಪರ್ ಬಿಟ್ಟು ಕಸ ವಿಲೇವಾರಿ ಮಾಡುತ್ತಿದ್ದರು. ಆದರೆ, ಈಗ ಕಸದ ರಾಶಿ ರಾಶಿಯನ್ನು ನಗರಗಳಲ್ಲಿ ಕಾಣುತ್ತಿದ್ದೇವೆ ಎಂದ ಅವರು, ಜೆಡಿಎಸ್ ನಾಯಕರ ವಿರುದ್ಧ ಇಲ್ಲಸಲ್ಲದ ಹೇಳಿಕೆಯನ್ನು ಬಿಟ್ಟು ಅಭಿವೃದ್ಧಿಯ ಬಗ್ಗೆ ಕೆಲಸ ಮಾಡಲು ಮುಂದಾಗಲಿ ಎಂದು ಸಲಹೆ ನೀಡಿದರು.