ಹಾಸನ: ಮೊನ್ನೆ ರಾಜ್ಯಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದು, ಅವರ ಸಹಕಾರ ಪಡೆದು ರಾಜ್ಯದ ರೈತರ, ಸ್ತ್ರೀಯರ ಸಂಘ ಸಂಸ್ಥೆಗಳ ಪೂರ್ಣ ಸಾಲ ತೀರಿಸಿದರೆ ಮುಂದೆ 150 ಸೀಟುಗಳನ್ನೂ ತೆಗೆದುಕೊಳ್ಳಬಹುದು ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಕೇಂದ್ರದ ಸಹಾಯದಿಂದ ಬಡವರ ವಿವಿಧ ಸಾಲಗಳನ್ನು ತೀರಿಸಿದರೆ ಮುಂದೆ 150 ಸೀಟುಗಳನ್ನೂ ಗೆಲ್ಲಬಹುದು: ರೇವಣ್ಣ ವ್ಯಂಗ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಶಪಥ ಮಾಡಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಮಾಡಿದ ರೀತಿಯಲ್ಲಿ ಅವರು ರೈತರ, ಶ್ರೀ ಶಕ್ತಿ ಸಂಘದವರ, ಬಡವರ ಹಾಗೂ ಕೂಲಿ ಕಾರ್ಮಿಕರ ಸಾಲಮನ್ನಾ ಮಾಡಿದರೆ ಮಾತ್ರ 150 ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಎಲ್ಲ ಮತದಾರರು ಜೆಡಿಎಸ್ ಗೆ ಮತ ಹಾಕುತ್ತಾರೆ ಎನ್ನುವ ಮೂಲಕ ರಾಜ್ಯ ಸರ್ಕಾರದ ವೈಖರಿಯನ್ನು ರೇವಣ್ಣ ಟೀಕಿಸಿದರು.
ನಾವು ಈಗ ಏನು ಹೇಳಲ್ಲ. ಒಳ್ಳೆಯ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಹೇಳಿದ್ದಾರೆ. ಅವರಿಗೊಂದು ಅವಕಾಶ ಕೊಡಬೇಕು. ಕಳೆದ ಇಪ್ಪತ್ತು ತಿಂಗಳಿಂದ ದ್ವೇಷದ ರಾಜಕಾರಣ ಮಾಡುತ್ತಾ ನಮ್ಮ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ. ಈವರೆಗೂ ಜಿಲ್ಲೆಗೆ ಬಿಡಿಗಾಸು ಕೂಡ ಕೊಟ್ಟಿಲ್ಲ. ನಾವು ತಾಳ್ಮೆ ಕಳೆದುಕೊಳ್ಳದೇ ಸುಮ್ಮನಿಲ್ಲ ಮತದಾರರು ಇದ್ದಾರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಚಾಟಿ ಏಟು ಯಾವ ರೀತಿ ಬೀಸುತ್ತಾರೆ ನೀವೇ ನೋಡುವಿರಂತೆ ಎಂದರು.
ಇನ್ನು ಕನ್ನಡ ನೆಲ ಜಲ ಭಾಷೆ ವಿಚಾರ ಬಂದರೆ ನಮ್ಮ ಪಕ್ಷ ಮುಂಚೂಣಿಯಲ್ಲಿರುತ್ತದೆ ಎನ್ನುವ ಮೂಲಕ ಉದ್ಬವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ರಾಜ್ಯದ ಒಂದು ಅಡಿ ಭೂಮಿಯನ್ನು ಕೂಡ ಬೇರೆ ರಾಜ್ಯಕ್ಕೆ ಬಿಟ್ಟುಕೊಡಲು ನಾವು ಒಪ್ಪುವುದಿಲ್ಲ. ಹಿಂದಿನ ನಾಯಕರುಗಳು, ಕನ್ನಡಪರ ಹೋರಾಟಗಾರರ ಹೋರಾಟದ ಫಲವಾಗಿ ನಮ್ಮ ರಾಜ್ಯ ಉಳಿದಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಯಮಾವಳಿಯ ಪ್ರಕಾರ ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.