ಕರ್ನಾಟಕ

karnataka

ETV Bharat / state

ವಸತಿ ಶಾಲೆಗಳ ಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸಿ: ಡಿಸಿಎಂ ಕಾರಜೋಳ ಸೂಚನೆ - ಲೋಕೋಪಯೋಗಿ ಮತ್ತು ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ

ಹಾಸನ ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಶೈಕ್ಷಣಿಕ ಪರಿಸರ ಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

ಕಾರಜೋಳ
Govinda karajola

By

Published : Feb 8, 2020, 11:19 PM IST

Updated : Feb 8, 2020, 11:42 PM IST

ಹಾಸನ: ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಶೈಕ್ಷಣಿಕ ಪರಿಸರ ಸುಧಾರಣೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಕಾರಜೋಳ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ದೊರಕಿಸುವಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರೆಯುವಂತಾಗಬೇಕು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಫಲಿತಾಂಶ ಕಡಿಮೆ ಇರುವ ಕಡೆ ನಿವೃತ್ತ ಶಿಕ್ಷಕರಿಂದ ಮನೆಪಾಠ ಮಾಡಿಸಿ, ಫಲಿತಾಂಶ ಹೆಚ್ಚಿಸಿ ಎಂದು ಸೂಚಿಸಿದರು.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಯುವುದರೊಳಗೆ ವಿದ್ಯಾರ್ಥಿವೇತನ ಅವರ ಖಾತೆಗೆ ವರ್ಗಾವಣೆಯಾಗಿರಬೇಕು. ಜಿಲ್ಲೆಗೆ ಹೆಚ್ಚುವರಿಯಾಗಿ ಹಾಸ್ಟೆಲ್‌ಗಳ ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ ಎಂದರು.

ಜಿಲ್ಲೆಯಲ್ಲಿ ಭವನಗಳ ನಿರ್ಮಾಣಕ್ಕೆ ನಿವೇಶನಗಳ ಸ್ಥಳಾವಕಾಶ ಇದ್ದಲ್ಲಿ ಮಾತ್ರ ಪ್ರಸ್ತಾವನೆ ಸಲ್ಲಿಸಿ. ರಾಜ್ಯದಲ್ಲಿ ಈಗಾಗಲೇ ವಿವಿಧ ನಿಗಮಗಳಡಿ 1,400 ಕೋಟಿ ಅನುದಾನ ನೀಡಿ 6,900 ಭವನಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. 2,700 ಕಾಮಗಾರಿಗಳು ಪೂರ್ಣವಾಗಿವೆ. ನಿವೇಶನ ದೊರಕಿಲ್ಲದ ಕಡೆಗಳಲ್ಲಿ ಮಾತ್ರ ಅನುದಾನ ಹಿಂಪಡೆಯಲಾಗಿದೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಜಿಲ್ಲೆಗಳಲ್ಲಿ ಆ ಕುರಿತು ಪ್ರಕರಣಗಳಿದ್ದಲ್ಲಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪತ್ತೆ ಹಚ್ಚಲು ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ಜಂಟಿಯಾಗಿ ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು. ಜೊತೆಗೆ ಸಕಲೇಶಪುರ ತಾಲೂಕಿನ ಬೆಟ್ಟದ ಮೇಲಿರುವ ಇಂದಿರಾಗಾಂಧಿ ಶಾಲೆಗೆ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಹಾಸ್ಟೆಲ್‌ಗಳ ಕಾಮಗಾರಿಗಳನ್ನು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ 15 ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

Last Updated : Feb 8, 2020, 11:42 PM IST

ABOUT THE AUTHOR

...view details