ಸಕಲೇಶಪುರ : ರಾಜ್ಯ ಗ್ರಾಮೀಣ ನೌಕರರು ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಂಘ ಸಕಲೇಶಪುರ ಘಟಕದ ವತಿಯಿಂದ ಅನಾಥ ಸಹೋದರಿಯರಿಗೆ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಮಾನವಿಯತೆ ಮೆರೆದರು.
ತಾಲೂಕಿನ ಮಳಲಿ ಗ್ರಾಮದ ಚಂದ್ರಕಲಾ, ಅರುಣಾಕ್ಷಿ ಎಂಬ ಅಕ್ಕ ತಂಗಿಯರು ತಮ್ಮ ಪೋಷಕರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದು, ಗುಡಿಸಲೊಂದರಲ್ಲಿ ವಾಸವಿದ್ದರು. ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇವರ ಗುಡಿಸಲು ಸಂಪೂರ್ಣ ಕುಸಿದು ಹೋಗಿತ್ತು. ಪರಿಣಾಮ ಸಹೋದರಿಯರಿಗೆ ನೆಲೆ ಇಲ್ಲದಂತಾಗಿತ್ತು.
ಸಹೋದರಿಯರಿಗೆ ಮನೆ ನಿರ್ಮಿಸಿಕೊಟ್ಟ ಅಧಿಕಾರಿಗಳು ಇದನ್ನೂ ಓದಿ: ಕೂಲಿ ಕೆಲಸ ಮಾಡಿ PhD ಪಡೆದ ನಿಯಾಝ್ ಪಣಕಜೆ
ಗುಡಿಸಲು ಕುಸಿದು ಬಿದ್ದಾಗ ಸ್ಥಳಕ್ಕೆ ಆಗಮಿಸಿದ್ದ ತಾ.ಪಂ ಇ.ಒ ಹರೀಶ್, ಸಹೋದರಿಯರಿಗೆ ಸರ್ಕಾರದಿಂದ ಮನೆ ಮಂಜೂರು ಮಾಡಿಸಲು ಯೋಜಿಸಿದರು. ಆದರೆ, ಜಾಗದ ತಾಂತ್ರಿಕ ದೋಷದಿಂದ ಮನೆ ಮಂಜೂರು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ತಾಲೂಕಿನ ಸುಮಾರು 26 ಗ್ರಾ. ಪಂಗಳ ಪಿಡಿಒಗಳು, ತಾ.ಪಂ ಸಹಾಯಕ ನಿರ್ದೇಶಕ, ಇತರ ಸಿಬ್ಬಂದಿ, ನರೇಗಾ ಅಭಿಯಂತರು ಮತ್ತು ಕೆಲವು ತಾ.ಪಂ ಸದಸ್ಯರು ವೈಯುಕ್ತಿಕ ಸಹಾಯದಿಂದ ಸುಮಾರು 3,30 ಸಾವಿರ ರೂ. ಹಣ ಸಂಗ್ರಹಿಸಿದ್ದರು. ಮರಳು, ಇಟ್ಟಿಗೆ ,ಜಲ್ಲಿಯನ್ನು ಕೆಲ ಸಾರ್ವಜನಿಕರು ದಾನ ಮಾಡಿದ್ದರು. ಎಲ್ಲರ ಪರಿಶ್ರಮದಿಂದ ಅಂತಿಮವಾಗಿ ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ಅನಾಥ ಸಹೋದರಿಯರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಶುಕ್ರವಾರ ಮನೆಯ ಕೀಯನ್ನು ಹಸ್ತಾಂತರಿಸಲಾಯಿತು. ಇದರಿಂದ ಸೂರಿಲ್ಲದೆ ಪರದಾಡುತ್ತಿದ್ದ ಅನಾಥ ಅಕ್ಕತಂಗಿಯರ ಬಾಳಿನಲ್ಲಿ ಹೊಸ ಬೆಳಕು ಮೂಡಿದೆ.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಉದಯ್, ಸಿಮೆಂಟ್ ಮಂಜು, ಪಿಡಿಓಗಳಾದ ಸುರೇಶ್, ವತ್ಸಲಾ ಕುಮಾರಿ , ಬ್ಯಾಕರವಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಮುಂತಾದವರು ಹಾಜರಿದ್ದರು.