ಹಾಸನ:ತನ್ನಿಂದ ದೂರಾಗುತ್ತಿದ್ದಾಳೆ ಎಂದು ಕೋಪಗೊಂಡ ಪ್ರಿಯಕರನೋರ್ವ ತನ್ನ ಪ್ರಿಯತಮೆಯನ್ನು ಭೀಕರವಾಗಿ ಕೊಲೆಗೈದ ಘಟನೆ ಗುರುವಾರ ಹಾಸನದಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ಕವಳಿಕೆರೆ ನಿವಾಸಿ ಸುಚಿತ್ರ (20) ಸಾವನ್ನಪ್ಪಿದ್ದಾರೆ. ಹಾಸನ ತಾಲ್ಲೂಕಿನ ಶಂಕರನಹಳ್ಳಿಯ ನಿವಾಸಿ ತೇಜಸ್ ಕೊಲೆ ಆರೋಪಿ.
ಪ್ರಕರಣದ ವಿವರ: ಮೊಸಳೆ ಹೊಸಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಬ್ಬರು ಬಿಇ ವ್ಯಾಸಂಗ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿದೆ. ಇದರಿಂದ ಕೋಪಗೊಂಡ ಯುವಕ ಗುರುವಾರ, ನಿನ್ನೊಂದಿಗೆ ಮಾತನಾಡಬೇಕು ಎಂದು ಯುವತಿಗೆ ತಿಳಿಸಿದ್ದಾನೆ. ಈ ಮಾತು ನಂಬಿ ಆಗಮಿಸಿದ ಯುವತಿಯನ್ನು ತಾಲ್ಲೂಕಿನ ಕುಂತಿಗುಡ್ಡಕ್ಕೆ ಕರೆದೊಯ್ದು, ಕೆಲಕಾಲ ಮಾತುಕತೆ ನಡೆಸಿದ್ದಾನೆ. ತನ್ನ ಮಾತಿಗೆ ಒಪ್ಪದ ಯುವತಿಯನ್ನು ಕೋಪದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.