ಹಾಸನ: ಇತ್ತೀಚೆಗೆ ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಹಾಗೂ ಹಿಜಾಬ್, ಕೇಸರಿ ವಿವಾದದಿಂದ ರಾಜ್ಯದ ಹಲವು ಕಡೆ ಸಂಘರ್ಷಗಳು ಉಂಟಾಗುತ್ತಿವೆ. ಇದರ ನಡುವೆ ಹಿಂದೂ-ಮುಸ್ಲಿಂ ನಡುವೆ ಸಾಮರಸ್ಯ ಬೆಸೆಯುವ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮುಸ್ಲಿಂ ಕುಟುಂಬವೊಂದು ಗಣಪತಿಗೆ ಪೂಜೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದೆ. ರಿಯಾಜ್ ಪಾಷಾ ಕುಟುಂಬದವರು ವಿಘ್ನ ವಿನಾಶಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಅದು ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಬೇಲೂರಿನ ಹೊರವಲಯದ ನೇರಳೆ ಆಲದ ಮರದ ಬುಡದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಬೇಲೂರು ಚನ್ನಕೇಶವ ಸ್ವಾಮಿ ಕನಸಿನಲ್ಲಿ ಬಂದು ಜಮೀನು ಬಳಿ ಪೂಜೆ ಸಲ್ಲಿಸಲು ಸೂಚಿಸಿದ್ದಾನೆ. ಹೀಗಾಗಿ ಇಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದೇವೆ ಎಂದು ರಿಯಾಜ್ ಪಾಷಾ ಹೇಳುತ್ತಾರೆ.
ಮುಸ್ಲಿಂ ಕುಟುಂಬದಿಂದ ಗಣೇಶ ಪೂಜೆ, ಸಾಮಾಜಿಕ ಸಾಮರಸ್ಯಕ್ಕೆ ಬೇಲೂರು ಸಾಕ್ಷಿ ಬೇಲೂರಿನ ದೀನ್ ದಯಾಳ್ ಬಡಾವಣೆಯಲ್ಲಿ ರಿಯಾಜ್ ಕುಟುಂಬ ಜಮೀನು ಹೊಂದಿದೆ. ರಿಯಾಜ್ ತಂದೆ ಭಾಷಾ ಸಾಹೇಬ್ಗೆ ಉಳುವವನೇ ಭೂಮಿ ಒಡೆಯ ಕಾನೂನಿನಿಂದ ಜಮೀನು ಸಿಕ್ಕಿತ್ತು. 8 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಗ್ರೂಪ್ಸ್ನ ನಾಗಣ್ಣ ಎಂಬುವರಿಗೆ ಇದೇ ಜಮೀನನ್ನು ರಿಯಾಜ್ ಮಾರಾಟ ಮಾಡಿದ್ದರು. ಆದರೆ 3 ತಿಂಗಳಿನಿಂದ ರಿಯಾಜ್ ಸಹೋದರನ ಮಗನ ಕನಸಿನಲ್ಲಿ ಬಂದು ಪೂಜೆ ಮಾಡಿಸುವಂತೆ ಚನ್ನಕೇಶವಸ್ವಾಮಿ ಸೂಚನೆ ನೀಡಿದ್ದಾನಂತೆ. ಹೀಗಾಗಿ ಪೂಜಾ ಕಾರ್ಯ ನೆರವೇರಿಸಿದ್ದಾರೆ.
ಇದನ್ನೂ ಓದಿ:ಹಾಸನ:170ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ನೆಲಸಮ ಮಾಡಿದ ಕಿಡಿಗೇಡಿಗಳು.. ರೈತನಿಗೆ ಶಾಕ್
ಚನ್ನಕೇಶವಸ್ವಾಮಿ ಅಣತಿಯಂತೆ ಜಮೀನಿನ ಮರದ ಬಳಿ ಪೂಜೆ ಸಲ್ಲಿಸಿದ್ದು, ಅನ್ಯ ಧರ್ಮವಾದರೂ ದೇವರ ಸೂಚನೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ವಿಶೇಷ ಎಂದರೆ ಅರ್ಚಕ ಮಂಜುನಾಥ್ ಶಾಸ್ತ್ರಿ ಮಾರ್ಗದರ್ಶನದಲ್ಲಿ ಈ ಪೂಜೆ ಮಾಡಲಾಗಿದೆ.
ರಿಯಾಜ್ ಕುಟುಂಬ ಪೂಜೆ ಸಲ್ಲಿಸುವಾಗ ಹಿಂದೂ ಧರ್ಮದ ಹಲವು ಜನರು ಸಾಥ್ ನೀಡಿದ್ದಾರೆ. ಒಟ್ಟಾರೆ ಧರ್ಮ ಮೀರಿ ಭಕ್ತಿ ತೋರಿ ರಿಯಾಜ್ ಮತ್ತು ಅವರ ಕುಟುಂಬ ಮಾದರಿಯಾಗಿದೆ.