ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಸನ:ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಈ ಗ್ಯಾರಂಟಿ ಯೋಜನೆಗಳು ಇನ್ನೆಷ್ಟು ವರ್ಷ ಇರುತ್ತವೆ ನೋಡೋಣ! ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕಳೆದ ಮೂರು ತಿಂಗಳಿಂದ ತಮಟೆ ಹೊಡೆದರು. ಈಗ ಮಾಡಬೇಡಿ ಅಂತ ಹಿಡ್ಕೊಂಡಿರೋರು ಯಾರು? ನಿಮ್ಮದೇ ಸರ್ಕಾರವಿದೆ. ತನಿಖೆ ಮಾಡಿಸಿ, ಬೇಡ ಅಂದೋರು ಯಾರು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದ ಸಂಸದರ ನಿವಾಸದಲ್ಲಿ ಭಾನುವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇನ್ನು ಹಾಸನಕ್ಕೆ ನಾನು ಆಗಾಗ್ಗೆ ಬರುವೆ. ಕೆಲವು ಆಯ್ದ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡುತ್ತೇನೆ. ಶಾಸಕ ಜಿ ಟಿ ದೇವೇಗೌಡರ ನೇತೃತ್ವದಲ್ಲಿ ಪ್ರವಾಸ ಮಾಡಲಾಗುತ್ತಿದೆ. ಈಗಾಗಲೇ ಎರಡು ಕಾರ್ಯಕ್ರಮಗಳನ್ನ ಘೋಷಿಸಿದ್ದು, ನಮ್ಮ ಒಬ್ಬ ಕಾರ್ಯಕರ್ತನೂ ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಡುತ್ತಿದ್ದೇನೆ. ಕಳೆದ 40 ವರ್ಷದಿಂದ ಪ್ರಾದೇಶಿಕ ಪಕ್ಷ ಉಳಿಸಲು ಅದೇ ಹೋರಾಟದಲ್ಲಿದ್ದೇನೆ. ನನಗೆ ಎಲ್ಲಿವರೆಗೂ ಕೈಕಾಲು ಆಡುತ್ತೋ ಅಲ್ಲಿವರೆಗೆ, ಕೊನೆ ಉಸಿರಿರೋವರೆಗೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಹೇಳಿದರು.
ಇದು ಸ್ವಲ್ಪ ಕಷ್ಟ ಅನ್ನೋದು ಎಲ್ಲರಿಗೂ ಗೊತ್ತು:ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದಲ್ಲಿ ಕೆಲ ಸ್ನೇಹಿತರಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಪದಗ್ರಹಣಕ್ಕೆ ಹಲವು ನಾಯಕರು ಬಂದಿದ್ದರು. ಆದರೆ, ಈಗ ಸರ್ಕಾರ ಬೇರೆ, ಈಗಿನ ಸರ್ಕಾರದ ಉದ್ದೇಶವು ಅವರಿಗೆ ಗೊತ್ತಿದೆ. ಆದ್ದರಿಂದ ಇದರ ಉದ್ದೇಶದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ನಾನು ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ಮಾತ್ರ ವೀಕ್ಷಿಸುತ್ತಿದ್ದೇನೆ. ಮೂರು ಬಾರಿ ಇಂಡಿಯಾದವರು ಮೀಟಿಂಗ್ ಮಾಡಿದ್ದಾರೆ. ಆದರೆ, ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಇರಲಿ, ಎಲ್ಲ ಪಾರ್ಟಿಗಳು ಸೇರಿ ಮೋದಿ, ಬಿಜೆಪಿಗೆ ಸೆಡ್ಡು ಹೊಡೆಯಲು ಹೊರಟಿದ್ದಾರೆ. ಇದು ಸ್ವಲ್ಪ ಕಷ್ಟ ಅನ್ನೋದು ನಿಮಗೂ ಗೊತ್ತು ನಮಗೂ ಗೊತ್ತು. ಹಾಗಾಗಿ ಈ ಬಗ್ಗೆ ನಾನು ಸದ್ಯಕ್ಕೆ ಯಾರನ್ನೂ ಟೀಕಿಸಲು ಇಷ್ಟಪಡುವುದಿಲ್ಲ. ಕಾದು ನೋಡೋಣ ಎಂದಷ್ಟೇ ಹೇಳಿದರು.
ತಮಟೆ ನಿಲ್ಲಿಸಿ, ತನಿಖೆ ಮಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಲಕ್ಷ್ಮಿ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೆ 2 ಸಾವಿರ ಕೊಟ್ಟ ವಿಚಾರವನ್ನು ಸುದ್ದಿ ಮಾಧ್ಯಮದಲ್ಲಿ ನೋಡಿದೆ. ಚಾಮುಂಡಿ ಹೆಣ್ಣು ದೇವತೆ. ಆ ತಾಯಿಗೂ 2 ಸಾವಿರ ಕೊಟ್ಟಿದ್ದಾರೆ. ಆ ಹಣವನ್ನು ಅವರು ಹುಂಡಿಗೆ ಹಣ ಹಾಕಲಿಲ್ಲ. ಆ ತಾಯಿಗೆ ಹಣ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ. ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ನೋಡೋಣ. ಮೂರು ನಾಲ್ಕು ತಿಂಗಳಲ್ಲೇ ಅದರ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದು ಮಾಜಿ ಪ್ರಧಾನಿ, ಬಿಟ್ ಕಾಯಿನ್ ಸೇರಿ ಬಿಬಿಎಂಪಿಯಲ್ಲಿ ನಡೆದ ಹಲವು ಅಕ್ರಮಗಳ ಬಗ್ಗೆ ತನಿಖೆ ಮಾಡುಸುತ್ತೇವೆಂದು ಕಾಂಗ್ರೆಸ್ನವರು ತಮಟೆ ಹೊಡೆದ್ರು. ನಿಮ್ಮದೇ ಸರ್ಕಾರವಿದೆ. ಮಾಡಸಬೇಡಿ ಅಂತ ಹೇಳಿದವರಾರು? ಎಂದು ದೇವೇಗೌಡರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ನಾನು ಹೇಳ್ಬೇಕಾದ ಜವಾಬ್ದಾರಿ ಇದೆ:ಮಾಧ್ಯಮಗೋಷ್ಟಿಗೂ ಮುನ್ನ ತಾಲೂಕಿನ ಬೈಲಹಳ್ಳಿಯಲ್ಲಿರುವ ಶ್ರೀ ಲಕ್ಷ್ಮಿಜನಾರ್ದನ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ದೊಡ್ಡದೊಂದು ಹೆಸರಿನ ಪಟ್ಟಿಕೊಟ್ಟು ಕುಟುಂಬ ಸಹಿತ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಾತನಾಡಿದ ಅವರು, ಕಾವೇರಿ ನೀರಿನ ವಿಷಯದಲ್ಲಿ ನಿಮ್ಮ ಮುಂದೆ ಹೇಳುವಷ್ಟು ಶಕ್ತಿ ಇಲ್ಲ. ಕುಮಾರಸ್ವಾಮಿಯವರು, ಸಿದ್ದರಾಮಯ್ಯನವರ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ ನಡೆದ ಮಾತಿನ ಸಾರಾಂಶವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಒಂದುಕಡೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನವಾಗಿಲ್ಲ, ಹಾಗೇ ಪ್ರಾಧಿಕಾರವೂ ಏನೂ ತೀರ್ಮಾನ ಮಾಡಿಲ್ಲ. ಮಂಡ್ಯದಲ್ಲಿ ಕಾವೇರಿ ಹೋರಾಟ ನಡೀತಾ ಇದೆ. ನಾನು ಹೇಳ್ಬೇಕಾದ ಜವಾಬ್ದಾರಿ ಇದೆ. ನಾನು ಇನ್ನು ಏನೂ ಮಾತನಾಡಿಲ್ಲ. ನಾನು ಮಾತನಾಡುವ ಟೈಮ್ ಬರಬೇಕು. ಬಂದಾಗ ಮಾತಾಡ್ತೇನೆ. ಈಗ ನಾನು ಏನೂ ಮಾತನಾಡೋದಿಲ್ಲ, ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನಿವೇಶ ಬಂದಾಗ ಮಾತಾಡ್ತೇನೆ ದೇವೇಗೌಡ್ರು ಎಂದು ಹೇಳಿದರು.
ಅದರ ಲೀಡರ್ ಯಾರು:ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ, ದಿನಕ್ಕೊಂದು ಹೇಳಿಕೆಗಳನ್ನು ಕೊಡ್ತಾರೆ. ಬಾಂಬೆಯಲ್ಲಿ ವಿವಿಧ ಗುಂಪಿನ ಒಂದು ದೊಡ್ಡ ಮಹಾಸಭೆ ನಡಿದಿತ್ತು. ಸೆ.30 ರೊಳಗೆ ಎಲ್ಲಾ ಸೀಟ್ ನಿಗದಿ ಮಾಡ್ತಿವಿ ಅಂತ ಹೇಳಿದರು. ಏನಾಯ್ತು? ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ! ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ! ಒಂದು ಕಮಿಟಿ ಮಾಡಿದ್ದಾರೆ. ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಎರಡು ದಿನ ಬೊಂಬಾಯ್ ಮೀಟಿಂಗ್ ನಡಿತು ಅಷ್ಟೇ ಎಂದ್ರು. ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಇದೆ. ನೋಡೋಣ. ಇನ್ನೂ ನಾನು ಬದುಕಿದ್ದೀನಿ ಅಲ್ವಾ ಎಂದರು.
ಇದನ್ನೂ ಓದಿ:One nation one election: 'ಒಂದು ರಾಷ್ಟ್ರ ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ; ರಾಹುಲ್ ಗಾಂಧಿ