ಹಾಸನ: ಸರ್ಕಾರ ಆರೋಗ್ಯ ವಿಚಾರಕ್ಕೆ ಬಿಟ್ಟರೆ ಸಾಮಾನ್ಯ ಜನರ ಕಷ್ಟಗಳಿಗೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಸಂಘಟಿತ ಮತ್ತು ಮಧ್ಯಮ ವರ್ಗದವರಿಗೆ ಲಾಕ್ಡೌನ್ನಿಂದ ಸಾಕಷ್ಟು ತೊಂದರೆಯಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಪರದಾಡುತ್ತಿದ್ದಾರೆ. ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಲ್ಲಿ ಜನ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತದೆ ಎಂಬುದನ್ನು ನಮ್ಮ ಪಕ್ಷದ ಶಾಸಕರು ನನಗೆ ತಿಳಿಸಿದ್ದಾರೆ. ಇಂತಹ ನೊಂದವರಿಗೆ ಸರ್ಕಾರದ ಪರಿಹಾರ ಸಾಮಗ್ರಿಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖ್ಯಸ್ಥರು ನೀವು ಹಿರಿಯರು ನಿಮ್ಮ ಅನುಭವವನ್ನು ತಿಳಿಸಿ ಎಂದಿದ್ದರು. ನಾನು ಕೂಡ ಪತ್ರದ ಮೂಲಕ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ. ಆದರೆ ಅವರು ಸರಿಯಾದ ಉತ್ತರವನ್ನು ನೀಡಿಲ್ಲ. ಮರು ಉತ್ತರ ಕೊಡಬೇಕು ಎಂಬ ಕಾರಣಕ್ಕೆ ಕೊಟ್ಟಿದ್ದಾರೆ ಅಷ್ಟೇ. ಇನ್ನು ಈಗಾಗಲೇ ಬಡವರಿಗೆ 5 ಕೆಜಿ ಅಕ್ಕಿ ಮತ್ತು ಗೋಧಿ ಕೊಡುತ್ತಿದ್ದಾರೆ. ಅಷ್ಟು ಕೊಟ್ಟರೆ ಸಾಕೆ? ಬೇರೆ ದಿನಸಿ ಪದಾರ್ಥಗಳು ಕೂಡ ಜನರಿಗೆ ಕೊಡಬೇಕಲ್ಲ. ಜನತಾ ಕರ್ಫ್ಯೂ ಮಾಡಿ ಎಂದರು ಮತ್ತು ದೀಪ ಬೆಳಗಿ ಎಂದರು ಎರಡಕ್ಕೂ ನಾವು ಒಪ್ಪಿದೆವು.
ಜೆಡಿಎಸ್ ವರಿಷ್ಠ ದೇವೇಗೌಡ ಬೇಸರ ಇನ್ನು ನಮ್ಮ ಜಿಲ್ಲೆ ಸೇರಿದಂತೆ ರಾಜ್ಯದ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಜೊತೆಗೆ ಕೃಷಿ ಸಾಲದ ಕಂತುಗಳನ್ನು ಕಟ್ಟಲು ಮೂರು ತಿಂಗಳ ಕಾಲಾವಧಿ ನೀಡಿದ್ದು, ಬ್ಯಾಂಕ್ಗಳಿಗೆ ಅಧಿಕೃತ ಆದೇಶ ಪತ್ರ ರವಾನಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಹಾಸನದಲ್ಲಿ ಯಾವುದೇ ರೀತಿಯ ಕೊರೊನಾ ಪ್ರಕರಣ ದಾಖಲಾಗಿಲ್ಲ. ಆದರೆ ಇಲ್ಲಿಯ ಜನರು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅರಸಿಕೆರೆಯಲ್ಲಿ ಬೆಳೆಯುವ ವಿವಿಧ ರೀತಿಯ ತೋಟಗಾರಿಕಾ ಬೆಳೆಗಳು ಮಣ್ಣು ಪಾಲಾಗುತ್ತಿವೆ. ಹೀಗಾಗಿ ಅಂತಾರಾಜ್ಯ ಗಡಿ ಭಾಗವನ್ನು ತೆರೆಯಬೇಕು. ಸರಕು ಸಾಗಾಣಿಕೆ ವಾಹನಗಳು ಓಡಾಡಲು ಅವಕಾಶ ನೀಡಬೇಕು. ಅಲ್ಲದೆ ರಾಜ್ಯದಿಂದ ಹೊರ ರಾಜ್ಯಕ್ಕೆ ಹೋಗುವ ತರಕಾರಿ ಪದಾರ್ಥಗಳನ್ನು ಏರ್ ಕಂಡೀಷನ್ ವಾಹನದ ಮೂಲಕ ರವಾನಿಸಿದರೆ ಇತರ ರಾಜ್ಯಗಳಿಗೂ ತಾಜಾ ತರಕಾರಿ ಸಿಗುತ್ತದೆ. ಅಂತರ್ಜಾಲದ ಮೂಲಕವೂ ತರಕಾರಿ ಕೊಳ್ಳಲು ಅವಕಾಶವಿದ್ದು, ಅದಕ್ಕೂ ಹೆಚ್ಚು ಒತ್ತು ಕೊಡಬೇಕು. ಎಲ್ಲಾ ಕ್ರಮಗಳನ್ನು ಸರ್ಕಾರ ಸೂಕ್ತ ರೀತಿಯಲ್ಲಿ ತೆಗೆದುಕೊಂಡಾಗ ಮಾತ್ರ ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ವಸ್ತುಗಳು ಮಾರಾಟವಾಗುತ್ತವೆ. ರೈತರ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಹಾಗಾಗಿ ಪ್ರತಿನಿತ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಾಧ್ಯವಾದರೆ ವಿಡಿಯೋ ಕಾಲ್ ಮೂಲಕ ಸಂವಾದ ಮಾಡಿ ಸಮಸ್ಯೆ ಆಲಿಸಬೇಕು. ಇಂತಹ ಹಲವಾರು ಕ್ರಮಗಳನ್ನು ಕೈಗೊಳ್ಳಲು ನಾನು ಈಗ ಕೇಂದ್ರ ಮತ್ತು ರಾಜ್ಯಕ್ಕೆ ಪತ್ರದ ಮೂಲಕ ಬರೆದಿದ್ದೇನೆ. ಯಾಕೆಂದರೆ ರೈತ ನಮ್ಮ ದೇಶದ ಬೆನ್ನೆಲುಬು. ಆತನಿಗೆ ಸಂಕಷ್ಟ ಎದುರಾದರೆ ಇಡೀ ದೇಶವೇ ಸಂಕಷ್ಟಕ್ಕೆ ಈಡಾಗುತ್ತದೆ. ಲಾಕ್ಡೌನ್ ಇದೇ ರೀತಿ ಮುಂದುವರೆದರೆ ಒಂದು ಕಡೆ ಕೃಷಿ ಚಟುವಟಿಕೆ ಮಾಡಬೇಕಾದ ರೈತ ಸಾವಿನ ದವಡೆಗೆ ಸರಿಯುತ್ತಾನೆ. ಹಾಗಾಗಿ ಬ್ಯಾಂಕ್ನಿಂದ ನೀಡುತ್ತಿರುವ ನೋಟಿಸ್ಅನ್ನು ತಕ್ಷಣ ತಡೆ ಹಿಡಿಯಬೇಕು. ಅಸಂಘಟಿತ ಕಾರ್ಮಿಕರು ಮತ್ತು ಕಾಫಿ ತೋಟದ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದು, ಅವರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಬೇಕು. ಇನ್ನು ಕೆಲವು ಕಡೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದರು.