ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಶುಕ್ರವಾರ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಪತ್ನಿ ಚನ್ನಮ್ಮ ಅವರನ್ನು ದೇವಾಯಲಯ ಅಧಿಕಾರಿಗಳು ಬರಮಾಡಿಕೊಂಡರು.
ವ್ಹೀಲ್ ಚೇರ್ನಲ್ಲಿ ಆಗಮಿಸಿ ದೇವರ ದರ್ಶನ ಪಡೆದ ದೊಡ್ಡಗೌಡರು; ವ್ಹೀಲ್ ಚೇರ್ನಲ್ಲಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ ಗೌಡರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದರ್ಬಾರ್ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಸಿದ್ದೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದರು. ಬಳಿಕ ಗೌಡರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವೇಗೌಡರ ಮಗಳು ಅನುಸೂಯ ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಕಾರ್ಯಕ್ಕೆ ಹೆಚ್ ಡಿ ದೇವೇಗೌಡರ ಮೆಚ್ಚುಗೆ; ದೇವಿಯ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ತಾಯಿ ದರ್ಶನಕ್ಕೆ ಪ್ರತೀ ವರ್ಷ ಕುಟುಂಬ ಸಮೇತರಾಗಿ ಬರುತ್ತೇವೆ. ದೇವಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾಳೆ. ದೇವಿಯ ಗರ್ಭಗುಡಿಯೊಳಗೆ ಹಚ್ಚಿಟ್ಟ ದೀಪ ವರ್ಷ ಆದರೂ ಆರುವುದಿಲ್ಲ. ಒಂದು ವರ್ಷ ಆನಂದವಾಗಿ ಉರಿಯುತ್ತೆ. ಉತ್ತರದಲ್ಲಿ ವೈಷ್ಣವಿ ಇದೇ ಸ್ವರೂಪದ ದೇವರು. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ವರ್ಗ ಹಾಸನಾಂಬೆ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.