ಹಾಸನ:ಹಾಲು ಉತ್ಪಾದಕರಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ಲೀಟರ್ ಹಾಲಿಗೆ1ರೂ. ಹೆಚ್ಚುವರಿ ನೀಡಲಾಗ್ತಿದೆ. ಪ್ರತಿ ಲೀಟರ್‌ಗೆ 27.50 ಕೊಡಲಾಗುವುದು ಎಂದು ಮಾಜಿ ಸಚಿವ ಹಾಗೂ ಹಾಸನ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್ ಡಿ ರೇವಣ್ಣ ತಿಳಿಸಿದರು.
ಮಾಜಿ ಸಚಿವ ಹೆಚ್ ಡಿ ರೇವಣ್ಣ.. ನಗರದ ಹಾಲು ಸಹಕಾರ ಹಾಲು ಒಕ್ಕೂಟದ ಸಭಾಂಗಣದಲ್ಲಿ ಇಂದು ಸಂಘಗಳ ಒಕ್ಕೂಟದ ಬಲ್ಕ್ ಮಿಲ್ಕ್ ಕೂಲರ್ ಕೇಂದ್ರ ಮತ್ತು ಸ್ವಯಂ ಚಾಲಿತ ಹಾಲು ಸಂಗ್ರಹಣೆ ಘಟಕಗಳ ಕಾರ್ಯಾಗಾರ ಹಾಗೂ ಹಾಲು ಉತ್ಪಾದಕರ ಸಂಘಗಳ ಕುಂದು ಕೊರತೆಗಳ ಸಮಾಲೋಚನ ಸಭೆ ಆಯೋಜಿಸಲಾಗಿತ್ತು. ಈ ಸಭೆಯನ್ನು ಹೆಚ್ ಡಿ ರೇವಣ್ಣ ಉದ್ಘಾಟನೆ ಮಾಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಇಂದಿನಿಂದ ಪ್ರತಿ ಉತ್ಪಾದಕರಿಗೆ ಒಂದು ಲೀಟರ್ ಹಾಲಿಗೆ 1 ರೂ. ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿಯೇ ಈ ಜಿಲ್ಲೆಯ ಹಾಲು ಒಕ್ಕೂಟದ ರೈತರಿಗೆ ಹಾಲಿನ ದರ ಹೆಚ್ಚಿಸಲಾಗಿದೆ. ಬೆಂಗಳೂರು ಒಕ್ಕೂಟದಲ್ಲಿ ಒಂದು ಲೀಟರ್ ಹಾಲಿಗೆ 26 ರೂ. ನೀಡಲಾಗುತ್ತಿದೆ. ಆದರೆ, ನಮ್ಮ ಒಕ್ಕೂಟದಿಂದ 27.50 ರೂ. ನೀಡುತ್ತಿದ್ದೇವೆ. ಒಕ್ಕೂಟದ ವ್ಯಾಪ್ತಿಯ 800 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣ ಮಾಡಲಾಗುವುದು. ಪ್ರಸಕ್ತ ಮಾಹೆ ವಹಿವಾಟಿನಲ್ಲಿ ಒಕ್ಕೂಟ 50 ಕೋಟಿ ಲಾಭಗಳಿಸಿದೆ. ಘಟಕವನ್ನು 22 ಕೋಟಿ ವೆಚ್ಚದಲ್ಲಿ ಟೆಟ್ರಾ ಪ್ಯಾಕ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ.
ಪ್ರತಿ ವರ್ಷ 70 ಲಕ್ಷ ಲೀಟರ್ ಹಾಲು ಸೈನಿಕರಿಗೆ ಸರಬರಾಜು ಮಾಡಲಾಗುತ್ತಿದೆ. 136 ಕೋಟಿ ರೂ. ವೆಚ್ಚದಲ್ಲಿ ಒಂದು ಗಂಟೆಗೆ 30 ಸಾವಿರ ಬಾಟ್ಲಿಂಗ್ ಮಾಡುವ ಹಾಲು ಉತ್ಪಾದಕ ಘಟಕ ಸ್ಥಾಪನೆ ಮಾಡಲು ರೂಪುರೇಷೆ ತಯಾರಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಈ ಘಟಕ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.