ಹಾಸನ: ಮಾತಿಗೆ ಕಟ್ಟುಬಿದ್ದು ಅದರಂತೆಯೇ ನಡೆದುಕೊಳ್ಳುವವರು ಇಡೀ ರಾಷ್ಟ್ರದಲ್ಲಿ ಯಾರಾದರೂ ಇದ್ದರೆ ಅದು ಹೆಚ್ ಡಿ ದೇವೇಗೌಡರು ಮಾತ್ರ ಎಂದು ದೇವೇಗೌಡರ ಪುತ್ರ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಮ್ಮ ತಂದೆಯನ್ನು ಹಾಡಿ ಹೊಗಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗ ಸೂರಜ್ ರೇವಣ್ಣ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಎರಡು ರಾಷ್ಟ್ರೀಯ ಪಕ್ಷಗಳು ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿವೆ. ಆದರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷ 50 ವರ್ಷಗಳ ಕಾಲ ರಾಜಕೀಯ ಮಾಡಿದೆ. ಆದರೆ ಪ್ರತಿ ಸಮಾಜಕ್ಕೂ ಸ್ಥಾನಮಾನ ಕೊಡಲು ದೇವೇಗೌಡರೇ ಬೇಕಾಯಿತು. ಈ ದೇಶಕ್ಕೆ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಎನ್ನುವ ಮೂಲಕ ಡಿ ಕೆ ಸುರೇಶ್ ಹೇಳಿಕೆಗೆ ಟಾಂಗ್ ನೀಡಿದರು.
ಜಿಲ್ಲೆಗೆ ಜೆಡಿಎಸ್ ಕೊಡುಗೆ ತುಂಬಾ ಇದೆ. ಜಿಲ್ಲಾ ಪಂಚಾಯತ್ ಮತ್ತು ನಗರಸಭೆಯಲ್ಲಿ ನಮ್ಮ ಪಕ್ಷದಿಂದ ಪರಿಶಿಷ್ಟ ಪಂಗಡದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ ಜೆಡಿಎಸ್ ಮೇಲೆತ್ತುವ ಕೆಲಸಕ್ಕೆ ಮುಂದಾಗಿದೆ. ಆದರೆ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಹೆಚ್ ಡಿ ರೇವಣ್ಣ ಸವಾಲು ಹಾಕಿದರು.