ಹಾಸನ: ಯಡಿಯುರಪ್ಪ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಆದರೆ ಹಾಸನ ಕಂಡ್ರೆ ಅವರಿಗೆ ಆಗಲ್ಲ. ಅದೆಷ್ಟು ದಿನ ಮಾಡ್ತಾರೋ ಮಾಡ್ಲಿ. ನಂತರ ಏನ್ ಮಾಡಬೇಕು ಅಂತ ನಿರ್ಧಾರ ಮಾಡ್ತೀನಿ. ದೇವೇಗೌಡ್ರ ಮಕ್ಳು ಅದೇನ್ ಕಡ್ದು ಕಟ್ಟೆಯಾಕವ್ರೆ ಅಂತಾನೂ ಹೇಳ್ತೀನಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸವಾಲ್ ಹಾಕಿದರು.
ಅದೆಷ್ಟು ದಿನ ಮಾಡ್ತಾರೋ ಮಾಡ್ಲಿ, ನಾನೂ ನೋಡ್ತಿನಿ: ರೇವಣ್ಣ ಗರಂ - chief minister b.s.yadiyurappa
ಸಿಎಂ ಯಡಿಯೂರಪ್ಪ ನಾನು ದ್ವೇಷ ರಾಜಕಾರಣ ಮಾಡಲ್ಲ ಎಂದು ಹೇಳಿದ್ದಾರೆ. ಈಗ ಅದನ್ನೇ ಮಾಡಲು ಮುಂದಾಗಿದ್ದಾರೆ. ಅದೆಷ್ಟು ದಿನ ಮಾಡ್ತಾರೋ ಮಾಡ್ಲಿ. ನಂತರ ಏನ್ ಮಾಡಬೇಕು ಅಂತ ನಿರ್ಧಾರ ಮಾಡ್ತೀನಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಎರಡೂ ಸರ್ಕಾರಗಳು ಜಿಲ್ಲೆಯನ್ನು ಕಡೆಗಣಿಸುತ್ತಾ ಬಂದಿವೆ. ಅಲ್ಲದೆ ಬಿಡಿಗಾಸು ಕೂಡ ಕೊಟ್ಟಿಲ್ಲ. ಶಿವಮೊಗ್ಗ ಮತ್ತು ಶಿಕಾರಿಪುರವನ್ನು ಅಭಿವೃದ್ಧಿ ಮಾಡಿಯೇ ಹಾಸನವನ್ನು ಅಭಿವೃದ್ಧಿ ಮಾಡಲಿ. ಅದನ್ನ ಬಿಟ್ಟು ದ್ವೇಷ ರಾಜಕೀಯ ಮಾಡ್ತೀನಿ ಅಂದರೆ ಮಾಡಲಿ. ನಾನು ನೋಡುತ್ತೇನೆ ಎಂದು ಖಾರವಾಗಿ ನುಡಿದರು.
ಮೈತ್ರಿ ಸರ್ಕಾರದಲ್ಲಿ ₹ 63 ಕೋಟಿ ವೆಚ್ಚದಲ್ಲಿ ಹಾಸನಕ್ಕೆ ತೋಟಗಾರಿಕಾ ಇಲಾಖೆಯೊಂದು ಮಂಜೂರಾಗಿತ್ತು. ಆದರೆ, ಬಿಜೆಪಿ ಸರ್ಕಾರ ಆ ಆದೇಶಕ್ಕೆ ತಡೆ ನೀಡಿದೆ. ಸಿಎಂಗೆ ಸಮಯ ಕೊಟ್ಟು ಆಮೇಲೆ ಮಾತಾಡ್ತೀನಿ. ಒಟ್ಟಾರೆ ಹಾಸನದ ಅಭಿವೃದ್ಧಿಗೆ ಒತ್ತು ಕೊಡಲಿ. ಸ್ಥಳೀಯ ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡಲಿ. ಬೇಡ ಎನ್ನುವುದಿಲ್ಲ. ಆದರೆ ಜಿಲ್ಲೆ ಕಡೆಗಣಿಸಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ₹ 590 ಕೋಟಿ ನಷ್ಟವಾಗಿದ್ದು, 25 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ (ಎನ್‌ಡಿಆರ್‌ಎಫ್) ಅಧಿಕಾರಿಗಳು ಕೇವಲ ₹ 9 ಕೋಟಿ ನಷ್ಟ ಎಂದು ವರದಿ ನೀಡಿದ್ದಾರೆ. ಮತ್ತೊಮ್ಮೆ ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟು ಆದಷ್ಟು ಬೇಗ ಪರಿಹಾರದ ಹಣವನ್ನು ಬಿಡುಗಡೆ ಮಾಡಿಸುವಂತೆ ಬಿಎಸ್ವೈಗೆ ಒತ್ತಾಯಿಸಿದರು.
ನೋಡ್ರಿ ಸರ್ಕಾರ ಟೇಕಾಫ್ ಆಫ್ ಆಯ್ತೋ, ಸೈಕಲ್ ಆಯ್ತೋ.. ಅದೆಲ್ಲಾ ನಂಗೊತ್ತಿಲ್ಲ. ಮೊದಲು ಪ್ರವಾಹದ ಸಮಸ್ಯೆ ಮುಗಿಯಲಿ ಅಷ್ಟೇ. ನಾನೀಗ ಹೊಳೆನರಸೀಪುರಕ್ಕೆ ಮಾತ್ರ ಸೀಮಿತವಲ್ಲ. ನಾನು ರಾಜಕಾರಣ ಮಾಡಿದ್ದೇನೆ. ಮುಂದೆ ಜಿಲ್ಲೆಗೇನು ಮಾಡಬೇಕು ಅಂತ ಗೊತ್ತಿದೆ. ಪ್ರವಾಹದ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಎಂದ ಅವರು, ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದು ಹೇಳಿದರು.